ಆನೇಕಲ್ : ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ರಸ್ತೆ ಬದಿ ಚಿಲ್ಲರೆ ಅಂಗಡಿ, ಸಣ್ಣಪುಟ್ಟ ಹೊಟೇಲ್, ತರಕಾರಿ ಇನ್ನಿತರೆ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿದ್ದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಒಕ್ಕೂಟದ ದರ್ಪವನ್ನು ಈಟಿವಿ ಭಾರತ್ ವರದಿ ಮಾಡಿತ್ತು. ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಈಟಿವಿ ಭಾರತದ ವಿಸ್ತೃತ ವರದಿಯ ಬಳಿಕ ಇದೀಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.
ಹೃದಯಖಾಯಿಲೆ, ಅಂಗವೈಕಲ್ಯದಂತಹ ಆರೋಗ್ಯ ಸಮಸ್ಯೆಗಳ ನಡುವೆ ಬೆನ್ನಿಗೆ ಬಿದ್ದ ಸಂಸಾರದ ಹೊಣೆಯನ್ನು ಬೀದಿಬದಿ ವ್ಯಾಪಾರದ ಇಲ್ಲಿ ಜನರು ನಿಭಾಯಿಸುತ್ತಿದ್ದರು. ಆದರೆ ಏಕಾಏಕಿ ಬಿಐಎ ತಂಡ ಜೆಸಿಬಿಗಳನ್ನು ತಂದು ಅಂಗಡಿಗಳನ್ನು ತೆರವುಗೊಳಿಸಿ ಚಿಲ್ಲರೆ ವ್ಯಾಪಾರಿಗಳ ಬದುಕನ್ನು ನುಚ್ಚು ನೂರು ಮಾಡಿತ್ತು.
ಬೀದಿಬದಿ ವ್ಯಾಪಾರಿಗಳು ಒಂದೆಡೆ ಸಂಘಟಿತರಲ್ಲದ, ಯಾರೂ ಬೆಂಬಲಕ್ಕಿಲ್ಲದೇ ತತ್ತರಿಸಿದ್ದರು. ಹೀಗಾಗಿ ಬೀದಿಗಿಳಿದು ಹೋರಾಟ ಮಾಡಲೆತ್ನಿಸಿದ ವ್ಯಾಪಾರಿಗಳ ಪರ ಪ್ರಜಾ ಪರಿವರ್ತನಾ ಪಾರ್ಟಿ, ದಲಿತಸಂಘರ್ಷ ಸಮಿತಿ ಜೊತೆ ಈ ಟಿವಿ ಭಾರತ್ ನೊಂದವರ ಬೆನ್ನಿಗೆ ನಿಂತಿತ್ತು.
ಬೆಂಗಳೂರು ಗ್ರಾಮಾಂತರ ಆನೇಕಲ್ ಉಪವಿಭಾಗದ ಪೊಲೀಸ್ ಇಲಾಖೆಯ ಡಿವೈಎಸ್ಪಿ ನಂಜುಂಡೇಗೌಡ, ಹೆಬ್ಬಗೋಡಿ ಸಿಐ ಜಗದೀಶ್, ವ್ಯಾಪಾರಿಗಳು ಮತ್ತು ಬಿಐಎ ನಡುವೆ ಸೇತುವೆಯಾಗಿ ಮಾತುಕತೆ ನಡೆಸಿ, ಬೀದಿಬದಿ ವ್ಯಾಪಾರಿಗಳ ಬದುಕಿನ ಸಂಕಷ್ಟಗಳನ್ನು ಮನವರಿಕೆ ಮಾಡಿ ನೆರವು ನೀಡಲು ತಾಕೀತು ಮಾಡಿದ್ದಾರೆ.
ಅದರಂತೆ ಕೆಡಿಬಿ ಹಾಗು ಬಿಐಎ ಅಧಿಕಾರಿಗಳೊಂದಿಗೆ ಡಿವೈಎಎಸ್ಪಿ ಕಚೇರಿ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿಗಳನ್ನು ಆಧುನಿಕವಾಗಿ ನಿರ್ಮಿಸಿ ಕೊಡುವುದಲ್ಲದೇ, ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯ ಒದಗಿಸುವ ಭರವಸೆ ಕೊಟ್ಟಿದ್ದಾರೆ.
ಈಟಿವಿ ಭಾರತ್ ವರದಿಯ ಫಲಶೃತಿಯಾಗಿ ಬೀದಿಬದಿ ವ್ಯಾಪಾರಿಗಳು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ.