ಬೆಂಗಳೂರು: "ಅಧಿಕಾರಕ್ಕೆ ಬರುತ್ತಿದ್ದಂತೆ ಯಾರಾದರೂ ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ, ಈಗ ಗುತ್ತಿಗೆದಾರರಿಂದ ಕಮೀಷನ್ ಬೇಡಿಕೆ ಕುರಿತು ಗಮನಕ್ಕೆ ತಂದಿದ್ದರೂ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಕೇಂದ್ರದ ಕಾಂಗ್ರೆಸ್ಗೆ ಈ ಸರ್ಕಾರ ಎಟಿಎಂ ಆಗಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ. ಸಚಿವರು ತಮ್ಮ ಜೇಬನ್ನು ತುಂಬಿಸಿಕೊಳ್ಳುವ ಕಡೆ ಗಮನ ಕೊಟ್ಟಿದ್ದಾರೆ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ. ಈಗ ಅವರದ್ದೇ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ಗೆ ಚಿಂತೆ ಇಲ್ಲ. ಇವರು ಅಧಿಕಾರಕ್ಕೆ ಬಂದರೆ ಕೇಂದ್ರದ ನಾಯಕರಿಗೆ ಎಟಿಎಂ ಆಗಲಿದೆ ಎಂದಿದ್ದೆವು. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಣ ಸಂಗ್ರಹದಲ್ಲಿ ತೊಡಗಿದ್ದಾರೆ. ತಮ್ಮ ಜೇಬೂ ತುಂಬಿಸಿಕೊಂಡು, ಕೇಂದ್ರದ ಕಾಂಗ್ರೆಸ್‌ನವರ ಜೇಬನ್ನೂ ತುಂಬಿಸುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ" ಎಂದರು.
"ಈ ಸರ್ಕಾರ ಗ್ಯಾರಂಟಿಗಳಿಗೆ ಸಾಲ ಮಾಡುತ್ತಿದೆ. ಈಗ 40-50 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬೇಕು ಎನ್ನುತ್ತಿದ್ದಾರೆ. ಆದರೆ, ಮುಂದೆ 80-90 ಸಾವಿರ ಕೋಟಿ ಸಾಲ ಮಾಡುವ ಪರಿಸ್ಥಿತಿ ಉದ್ಭವ ಆಗುತ್ತದೆ. ರಾಜ್ಯವನ್ನು ಸಾಲದಲ್ಲಿ ಮುಳುಗಿಸುತ್ತಿದ್ದಾರೆ. ಕೇವಲ ಗ್ಯಾರಂಟಿ ಕಡೆ ಎಲ್ಲರ ಗಮನ ಕೇಂದ್ರೀಕರಿಸಿ ಅಭಿವೃದ್ಧಿ ಕಡೆಗಣಿಸಿದ್ದಾರೆ. ಜನ ಈ ಸರ್ಕಾರದ ಮೇಲೆ ಶಾಪ ಹಾಕ್ತಿದ್ದಾರೆ. ನಾವು ಯಾಮಾರಿದೀವಿ ಅಂತ ಜನರಿಗೆ ಅರ್ಥ ಆಗಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮತದಾರರನ್ನು ಯಾವ ರೀತಿ ವಂಚಿಸುತ್ತಿದ್ದಾರೆ ಎನ್ನುವುದನ್ನೂ ಗಮನಿಸುತ್ತಿದ್ದಾರೆ" ಎಂದು ಹೇಳಿದರು.
"ಸರ್ಕಾರ ಬಂದು ಮೂರು ತಿಂಗಳಾಗಿದೆ. ಗುತ್ತಿಗೆದಾರರು ಮೂರ್ನಾಲ್ಕು ಮಂತ್ರಿಗಳ ಮೇಲೆಯೇ ನೇರವಾಗಿ ಕಮೀಷನ್ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಡುತ್ತೇವೆ ಅಂತ ಜನರ ಕಿವಿ ಮೇಲೆ ಹೂ ಇಟ್ಟು ಅಧಿಕಾರ ಪಡೆದರು. ಈಗ ಜನರಿಗೆ ಮೋಸ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎರಡು ಮೂರು ತಿಂಗಳಲ್ಲೇ ಈ ಪರಿಸ್ಥಿತಿ ಬಂದಿದೆ. ಮುಂದೆ ಇನ್ಯಾವ ಪರಿಸ್ಥಿತಿ ಬರುತ್ತದೆ ಅಂತ ಕಾದು ನೋಡಿ" ಎಂದರು.
ಶಾಸಕರಿಗೆ ಅನುದಾನ ಸಿಗದ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, "ವಿಪಕ್ಷಗಳ ಶಾಸಕರನ್ನು ಬಿಟ್ಟುಬಿಡಿ, ಆಡಳಿತ ಪಕ್ಷದ ಸದಸ್ಯರೇ ತಮ್ಮ ಕ್ಷೇತ್ರದಲ್ಲಿ ತಲೆ ಎತ್ಕೊಂಡು ಓಡಾಡಲು ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಒಂದು ರಸ್ತೆ ಮಾಡಿಸಲು, ಟಿಸಿ ಹಾಕಿಸಲು ಅನುದಾನ ಇಲ್ಲ. ಅವರ ಪಕ್ಷದ ಶಾಸಕರಿಗೆ ಹಣ ಕೊಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ. ಈ ಸರ್ಕಾರ ಯಾವ ದಿಕ್ಕಿಗೆ ಸಾಗುತ್ತಿದೆ?. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಲ್ಲಿ ಕೆಲಸ ಆಗಿದೆ. ಜನ ಈಗಲೂ ಕೂಡಾ ಇದನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ, ಈ ವರ್ಷ ಅನುದಾನ ಕೇಳಬೇಡಿ ಎಂದು ಅವರ ಶಾಸಕರಿಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾಗಿ, ಈ ವರ್ಷ ಶಾಸಕರಿಗೆ ಅನುದಾನ ನಿರೀಕ್ಷೆ ಮಾಡಕ್ಕಾಗಲ್ಲ. ಕಾಂಗ್ರೆಸ್ ಶಾಸಕರು ಅಬ್ಬೇಪಾರಿಗಳಾಗಿದ್ದಾರೆ. ಜನ ಅಸಹಾಯಕರಾಗಿದ್ದಾರೆ" ಎಂದರು.
ರಾಜ್ಯಾಧ್ಯಕ್ಷರ ನೇಮಕ ವಿಳಂಬ ವಿಚಾರದ ಕುರಿತು ಮಾತನಾಡಿ, "ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಇದ್ದಾರೆ. ನಮಗೆ ಅಧ್ಯಕ್ಷರಿಲ್ಲ ಅಂತ ಏನಿಲ್ಲ. ಸರ್ಕಾರದ ವಿರುದ್ಧ ಹೋರಾಟ ಬಗ್ಗೆ ನಿನ್ನೆ ಸಂಸದರ ಜತೆ ಕಟೀಲ್ ಅವರು ಚರ್ಚೆ ನಡೆಸಿದ್ದಾರೆ. ಸರ್ಕಾರದ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ" ಎಂದು ಹೇಳಿದರು.
"ಗುತ್ತಿಗೆದಾರರ ಹಿಂದೆ ಯಾರ್ಯಾರಿದ್ದಾರೆ ಅಂತ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಅವರದ್ದೇ ತನಿಖೆ ಸಂಸ್ಥೆಗಳಿವೆ. ಯಾರ್ಯಾರು ಹಿಂದಿದಾರೆ ಅಂತ ಬಹಿರಂಗಪಡಿಸಬಹುದು. ಯಾರೂ ಅವರನ್ನು ತಡೆಯುತ್ತಿಲ್ಲ. ಆದರೆ, ಈ ವಿಚಾರ ಹೇಳಿಕೊಂಡು ಡಿಕೆಶಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಡಿ. ಕೆ ಶಿವಕುಮಾರ್ ಅವರು ತಮ್ಮ ಮೇಲೆ ಬಂದಿರುವ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಹಿರಿಯ ನಾಯಕರು ಈ ವಿಚಾರ ಗಂಭೀರವಾಗಿ ತಗೊಂಡಿದ್ದಾರೆ" ಎಂದರು.
ನಾಳೆ, ನಾಡಿದ್ದು ಹೋರಾಟದ ಬಗ್ಗೆ ಚರ್ಚೆ ಮಾಡುತ್ತಾರೆ. ನಾವು ಹತಾಶರಾಗಿ ಕಾಂಗ್ರೆಸ್ ಮೇಲೆ ಆರೋಪಿಸುತ್ತಿಲ್ಲ. ಆ ಪ್ರಶ್ನೆ ಉದ್ಭವವಾಗಿಲ್ಲ. ನಾವು ಶಾಶ್ವತವಾಗಿ ಅಧಿಕಾರದಲ್ಲಿ ಇರಬೇಕೆಂಬ ಭ್ರಮೆ ಇಲ್ಲ. ಆಗ ನಾವು ಅಧಿಕಾರದಲ್ಲಿ ಇದ್ದೆವು. ಈಗ ಕಾಂಗ್ರೆಸ್ ಇದೆ. ನಾಳೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈಗ ಮೂರ್ನಾಲ್ಕು ಮಂತ್ರಿಗಳ ಮೇಲೆ ಕಮೀಷನ್ ಆರೋಪ ಬಂದಿದೆ. ಮುಂದೆ ಮತ್ತಷ್ಟು ಮಂತ್ರಿಗಳ ಮೇಲೆ ಆರೋಪ ಬರಬಹುದು. ಆದರೆ, ಪಿತೂರಿಯಿಂದ ಮಾಡಿದ್ದಾರೆ ಎಂದು ನುಣುಚಿಕೊಳ್ಳುವುದು ಸರಿಯಲ್ಲ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮನೆ ಕುಸಿದಿರುವವರಿಗೆ ತಕ್ಷಣ ಪರಿಹಾರ ಒದಗಿಸಬೇಕು: ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಒತ್ತಾಯ