ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾದರೆ ಅದರಲ್ಲಿದ್ದ 3ನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ವಿಮಾ ಕಂಪನಿಗೆ ಆದೇಶಿಸಿದೆ.
ಕಲಬರಗಿಯಲ್ಲಿ 2011ರಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ನಲ್ಲಿದ್ದ ಮೂರನೇ ಸವಾರನಿಗೂ ವಿಮೆ ನೀಡುವಂತೆ 2012ರಲ್ಲಿ ಮೋಟರು ವಾಹನ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು. ಆದರೆ ಮೂರನೇ ಸವಾರನ ಕುಟುಂಬಕ್ಕೆ 8.10 ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕೆಂದು ಆದೇಶಿಸಿ ಮೋಟಾರು ವಾಹನ ನ್ಯಾಯಮಂಡಳಿಯ ಆದೇಶವನ್ನು ಒಪ್ಪದ ವಿಮಾ ಸಂಸ್ಥೆ ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಬೈಕ್ನಲ್ಲಿ ಮೂವರು ಪ್ರಯಾಣಿಸುವ ಮೂಲಕ ಸುರಕ್ಷತೆ ಹಾಗೂ ವಿಮಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಜತೆಗೆ ಬೈಕ್ ಸವಾರ ಸೂಕ್ತ ಚಾಲನಾ ಪರವಾನಗಿಯನ್ನೂ ಹೊಂದಿಲ್ಲ ಎಂದು ಆರೋಪಿಸಿತ್ತು.
ಅರ್ಜಿದಾರರ ಪರ ಮೊಹಮ್ಮದ್ ಸಿದ್ದೀಕ್ ಮತ್ತು ನ್ಯಾಷನಲ್ ಇನ್ಸ್ಯೂರೆನ್ಸ್ ಕಂಪನಿ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದರೂ ವಿಮೆ ಪಡೆಯಬಹುದು ಎಂದು ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಈ ಸಂದರ್ಭದಲ್ಲಿ ಅರ್ಜಿದಾರರು ಉಲ್ಲೇಖಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಅಂತಿಮವಾಗಿ ವಿಮಾ ಸಂಸ್ಥೆಯ ವಾದವನ್ನು ತಿರಸ್ಕರಿಸಿದೆ. ಹಾಗೆಯೇ, ಬೈಕ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದಕ್ಕೆ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ವಿಮೆ ಹಕ್ಕನ್ನು ನಿರಾಕರಿಸಲಾಗದು ಎಂದು ಆದೇಶಿಸಿದೆ.
ಇದನ್ನೂ ಓದಿ:ವಿಕಲಚೇತನ ವ್ಯಕ್ತಿಗೆ ನಿವೇಶನ ನೀಡದ ಪಾಲಿಕೆ : ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ಚಾಟಿ