ಬೆಂಗಳೂರು: ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಯಾಣ ಮೂಲದ ಹರ್ಷಾ ಆರೋ, ಸುರಬ್ಜಿತ್ ಬಂಧಿತ ಆರೋಪಿಗಳು. ಈ ಆರೋಪಿಗಳು ಬ್ಯಾಟರಾಯನಪುರದ ಮೈಸೂರು ರಸ್ತೆಯಲ್ಲಿರುವ ಎಸ್ಬಿಐ ಎಟಿಎಂನಲ್ಲಿ ಹಣ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮೊದಲು ಇಬ್ಬರೂ ಆರೋಪಿಗಳು ಎಟಿಎಂ ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಒಳಹೊಕ್ಕಿದ್ದರು. ನಂತರ ಸಿಸಿಟಿವಿ ಕ್ಯಾಮರಾ ವೈಯರ್ ಕಟ್ ಮಾಡಿ ಎಟಿಎಂ ಯಂತ್ರ ತೆರೆಯಲು ಪ್ರಯತ್ನಿಸಿದ್ದಾರೆ.
ಈ ವೇಳೆ ಮುಂಬೈ ಎಸ್ಬಿಐ ಪ್ರಧಾನ ಕಚೇರಿಗೆ ಅಲಾರಂ ಮುಖಾಂತರ ಸಂದೇಶ ರವಾನೆಯಾಗಿದ್ದು, ತಕ್ಷಣ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಂಟ್ರೋಲ್ ರೂಮ್ ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಎಟಿಎಂ ಕಳ್ಳತನಕ್ಕೆ ಯತ್ನ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಎಟಿಎಂ ಶೆಟರ್ ಲಾಕ್ ಆಗಿದ್ದು ಕಂಡು ಅನುಮಾನ ಬಂದಿದೆ. ಅನಂತರ ಅಲ್ಲೇ ಕೆಲಕಾಲ ಕಾದ ಪೊಲೀಸರು, ಬಳಿಕ ಬೀಗವನ್ನು ಕೈಯಲ್ಲಿ ಮುಟ್ಟಿದಾಗ ಬೀಗ ತೆರೆದುಕೊಂಡಿದೆ. ಆಗ ಇಬ್ಬರು ಒಳಗಿರುವುದನ್ನ ಕನ್ಫರ್ಮ್ ಮಾಡಿಕೊಂಡ ಪೊಲೀಸರು, ಮತ್ತಷ್ಟು ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ಇನ್ನು ಎಟಿಎಂನಲ್ಲಿ 20 ಲಕ್ಷ ಹಣ ಇತ್ತು ಎಂದು ತಿಳಿದು ಬಂದಿದ್ದು, ದೊಡ್ಡ ಅನಾಹುತವನ್ನ ಪೊಲೀಸರು ತಪ್ಪಿಸಿದ್ದಾರೆ. ಬಂಧಿತರಿಂದ 100 ಕೆಜಿಯ ಗ್ಯಾಸ್ ಕಟರ್ ಹಾಗೂ ಫೆನ್ಸಿಂಗ್ ಕಟ್ ಮಾಡುವ ಕಟರ್ ವಶಪಡಿಸಿಕೊಂಡಿದ್ದಾರೆ.
ತನಿಖೆ ವೇಳೆ ಆರೋಪಿಗಳು ಬೆಂಗಳೂರಿನ ನಾಲ್ಕು ಕಡೆ ಎಟಿಎಂ ಹಣ ಕಳ್ಳತನ ಮಾಡಿ ತಪ್ಪಿಸಿಕೊಂಡು ಐದನೇ ಬಾರಿಗೆ ಸಿಕ್ಕ ಬಿದ್ದಿರುವ ವಿಚಾರ ತಿಳಿದುಬಂದಿದೆ. ಸದ್ಯ ಮಿಂಚಿನ ಕಾರ್ಯಚಾರಣೆ ನಡೆಸಿದ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಲಿಂಗರಾಜ್ ಹಾಗೂ ತಂಡಕ್ಕೆ ಹಿರಿಯ ಅಧಿಕಾರಿಗಳು ಭೇಷ್ ಎಂದಿದ್ದಾರೆ.