ಬೆಂಗಳೂರು : ಕೊರೊನಾ ಸೋಂಕಿತರು ಮತ್ತು ಶಂಕಿತರನ್ನು ಕರೆದೊಯ್ಯಲು ನಿಯೋಜನೆಗೊಂಡಿದ್ದ ಬಸ್ ಚಾಲಕನನ್ನು ತಡೆದು ದರೋಡೆ ಮಾಡಿರುವ ಘಟನೆ ಕೆ.ಆರ್. ಪುರಂನಲ್ಲಿ ನಡೆದಿದೆ.
ಕಮ್ಮನಹಳ್ಳಿ ಬಿಎಂಟಿಸಿ 31ನೇ ಡಿಪೋ ಬಸ್ ಚಾಲಕ ಮುತ್ತಯ್ಯಸ್ವಾಮಿ ದರೋಡೆಗೆ ಒಳಗಾದವರು. ದುಷ್ಕರ್ಮಿಗಳು ಇವರ ಮೇಲೆ ಹಲ್ಲೆ ನಡೆಸಿ 20 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು. ಪ್ರಕರಣ ಕೈಗೆತ್ತಿಕೊಂಡ ಕೆ.ಆರ್ ಪುರ ಪೊಲೀಸರು, ಗಣೇಶ್ ಮತ್ತು ಸೀನ ಎಂಬುವರನ್ನು ಬಂಧಿಸಿದ್ದಾರೆ.
ಮುತ್ತಯ್ಯಸ್ವಾಮಿ ಮೇ 8 ರಂದು ವಲಸೆ ಕಾರ್ಮಿಕರನ್ನು ಮಾಲೂರು ರೈಲು ನಿಲ್ದಾಣದಲ್ಲಿ ಬಿಟ್ಟು ವಾಪಸ್ ಆಗುತ್ತಿದ್ದರು. 7 ಗಂಟೆ ಸುಮಾರಿಗೆ ಬಸ್ ಡೀಸೆಲ್ ಶೆಡ್ ರಸ್ತೆಗೆ ಬರುತ್ತಿದ್ದಂತೆಯೇ ಬುಲೆಟ್‌ನಲ್ಲಿ ಬಂದ ಇಬ್ಬರು, ಮುತ್ತಯ್ಯ ಸ್ವಾಮಿಯನ್ನು ಕೆಳಗೆ ಇಳಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಾಗ ಕುತ್ತಿಗೆಯಲ್ಲಿದ್ದ 20 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದು, ದರೋಡೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.