ಬೆಂಗಳೂರು: ಮನೆಕಳ್ಳತನ ಮಾಡಿ ನೇಪಾಳಕ್ಕೆ ಎಸ್ಕೇಪ್ ಆಗಿದ್ದವನು ಹೆಂಡತಿಗಾಗಿ ತಾನೇ ಬಂದು ಪೊಲೀಸರು ಮುಂದೆ ಶರಣಾಗಿದ್ದಾನೆ. ಕಳ್ಳತನ ಕೇಸ್ನಲ್ಲಿ ಆರೋಪಿ ಹೆಂಡತಿಯನ್ನ ಪೊಲೀಸರು ವಿಚಾರಣೆಗೆ ಕರೆದಿದ್ದೆ ತಡ ಕದ್ದ ವಸ್ತುಗಳ ಸಮೇತ ಬಂದು ಶರಣಾಗಿದ್ದಾನೆ. ಈ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ನೇಪಾಳದಿಂದ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಸುರೇಂದ್ರ @ ಗೂರ್ಖಾ, ಗಣೇಶ್ @ ಕಡ್ಕ ಬಂಧಿತ ಆರೋಪಿಗಳಾಗಿದ್ದಾರೆ. 12 ವರ್ಷದಿಂದ ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡೇ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿ ಕಳ್ಳತನ ಮಾಡಿದ್ದರು.
ಮನೆಯ ಅಕ್ಕ ಪಕ್ಕದ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಚಂದ್ರಾಲೇಔಟ್ ಪೊಲೀಸರಿಗೆ ಸ್ಕೂಟಿ ನೀಡಿದ ಸುಳಿವಿನ ಮೇರಗೆ ಆರೋಪಿಗಳ ಗುರುತು ಪತ್ತೆಮಾಡಿದ್ರು. ಸ್ಕೂಟಿಯನ್ನು ಬೆನ್ನಟ್ಟಿದ್ದ ಪೊಲೀಸರಿಗೆ ಗಣೇಶನ ಮನೆ ವಿಳಾಸ ಪತ್ತೆಯಾಗಿತ್ತು. ಆದರೆ ಅದಾಗ್ಲೆ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ರು. ಈ ವೇಳೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಆರೋಪಿ ಗಣೇಶ್ ಹೆಂಡತಿಯ ವಿಚಾರಣೆ ಮಾಡಿದ್ದರು. ವಿಚಾರಣೆ ಮಾಡ್ತಿರೋದು ತಿಳಿಯುತ್ತಿದ್ದಂತೆ ಓಡೋಡಿ ಪೊಲೀಸರ ಬಳಿ ಬಂದಿದ್ದನು. ಬಳಿಕ ಗಣೇಶ ತಾನೂ ಕದ್ದ 450 ಗ್ರಾಂ ಚಿನ್ನಾಭರಣವನ್ನ ಪೊಲೀಸರಿಗೆ ಒಪ್ಪಿಸಿ ಶರಣಾಗಿದ್ದಾನೆ.
ಓದಿ: ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು..! ವಿಡಿಯೋ