ಬೆಂಗಳೂರು: ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿ ಮೇಲಿದ್ದ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಿಂದಿನ ಅ.24ರಂದು ಬಸವೇಶ್ವರ ನಗರದ ಸತ್ಯ ಗಣಪತಿ ದೇವಸ್ಥಾನದಲ್ಲಿ ರಾತ್ರಿ ಕಳ್ಳತನ ಮಾಡಿರುವ ಕಳ್ಳನ ಕರಾಮತ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗಣಪತಿ ದೇವರಿಗೆ ವಿಶೇಷ ಪೂಜೆ : ಹಿಂದಿನ ತಿಂಗಳು ಅಕ್ಟೋಬರ್ 24ರಂದು ಅಮಾವಾಸ್ಯೆ ಹಿನ್ನೆಲೆ ಗಣಪತಿಗೆ ವಿಶೇಷ ಪೂಜೆ ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಅಂದಿನ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಪೂಜೆ ಮುಗಿಸಿ ಎಂದಿನಂತೆ ಅರ್ಚಕ ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮಾರನೇ ದಿನ ಮುಂಜಾನೆ ದೇವಸ್ಥಾನಕ್ಕೆ ಬಂದು ನೋಡಿದಾಗ ದೇವರಿಗೆ ಹಾಕಿದ್ದ ಬೆಳ್ಳಿ ದೀಪ, ದೇವರ ಆಯುಧ ಹಾಗೂ ಬೆಳ್ಳಿ ಪಾದ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿ ಪರಿಶೀಲಿಸಿದ ದೇವಸ್ಥಾನದ ಹಿಂಬದಿಯಿಂದ ಖದೀಮ ನುಸುಳಿ ಬಂದಿರುವುದು ಗೊತ್ತಾಗಿದೆ. ದೇವರ ಆಭರಣಗಳನ್ನು ಕದ್ದ ಬಳಿಕ ಹುಂಡಿಯಲ್ಲಿದ್ದ ಹಣ ಕಳ್ಳತನ ಮಾಡಲು ಯತ್ನಿಸಿ ವಿಫಲವಾಗಿದ್ದಾನೆ. ನಂತರ ಕೈಗೆ ಸಿಕ್ಕ ಎಲ್ಲ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ. ದೂರು ಸಲ್ಲಿಸಿದ ಬಳಿಕ ಬಸವೇಶ್ವರ ನಗರ ಪೊಲೀಸರು ಕಳ್ಳನಿಗೆ ಶೋಧಕಾರ್ಯ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:ವೃದ್ಧೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ