ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಲು ಯಾವ ಮಾರ್ಗವೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಷ್ಟೇ ಸಮಾನ ಮನಸ್ಕರು ಸಭೆ ನಡೆಸಿದರೂ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 79 ಅಷ್ಟೇ, 115 ಆಗೋದಿಲ್ಲ. ಎಲ್ಲ ಸಮಾನ ಮನಸ್ಕರು ಒಗ್ಗೂಡಿದರೂ, ಕಾಂಗ್ರೆಸ್‍ಗೆ 113 ಶಾಸಕರ ಬೆಂಬಲ ಸಿಗುವುದಿಲ್ಲ. ಹಾಗಾಗಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಯಾವುದೇ ಪೂರಕ ವ್ಯವಸ್ಥೆ ಇಲ್ಲ. ಜೊತೆಗೆ ದೋಸ್ತಿ ಸರ್ಕಾರ ಏನೂ ಆಗಲ್ಲ ಎಂದರು.
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿರುವುದು ಸರಿಯಾಗಿಯೇ ಇದೆ. ಇನ್ನೂ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ವಿಚಾರದಲ್ಲಿ ಮಾತನಾಡುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅವರ ಆರೋಪದಿಂದಲೇ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದವು, ಅದಕ್ಕೆ ಜೆಡಿಎಸ್ ಕಾರಣವಲ್ಲ ಎಂದರು.
ನಾವಿಬ್ಬರೂ ಸ್ನೇಹಿತರು : ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಹಾಗೂ ನಾನು ಸ್ನೇಹಿತರಾಗಿದ್ದು, ಉಭಯ ಕುಶಲೋಪಚರಿಗಾಗಿ ಭೇಟಿಯಾಗಿದ್ದೆವು. ಸಹಜವಾಗಿ ರಾಜಕೀಯ ಚರ್ಚೆ ಮಾಡಿದ್ವಿ. ಚಾಮರಾಜನಗರದಲ್ಲಿ ಗೆಲ್ಲುತ್ತೇನೆ ಅನ್ನೋ ಮಾತು ಅವರು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಸ್ವಯಂ ಪ್ರೇರಿತರಾಗಿ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮತದಾನದ ಪ್ರಮಾಣ ಹೆಚ್ಚಾಗಿರುವುದನ್ನು ನೋಡಿದರೆ ಆಡಳಿತ ಪಕ್ಷದ ವಿರುದ್ಧ ಮತ ಹಾಕಿರಬಹುದು ಎನ್ನಿಸುತ್ತದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧವೋ, ರಾಜ್ಯ ಸರ್ಕಾರದ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ: ಚುನಾವಣಾ ಪೂರ್ವ ಹೊಂದಾಣಿಕೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸೀಮಿತವಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂದುವರೆಯುವುದಿಲ್ಲ ಎಂದು ವಿಶ್ವನಾಥ್ ಇದೇ ವೇಳೆ ತಿಳಿಸಿದರು. ಇನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ದೇವಸ್ಥಾನ ಭೇಟಿ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿಯವರು ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಾರೆ, ಆದರೆ ಬಿಜೆಪಿಯವರು ದಿನ ಬೆಳಗಾದರೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಟೀಕಿಸಿದರು. ರಾಜ್ಯದ ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಏನೇನು ಆಗುತ್ತದೆ ಕಾದುನೋಡೋಣ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಖಾಲಿ ಇರುವ ಸಚಿವ ಸ್ಥಾನಗಳು ಭರ್ತಿಯಾಗಲಿವೆ. ಪ್ರಮುಖ ಖಾತೆಗಳು ಹಂಚಿಕೆಯಾಗುತ್ತವೆ ಎಂದು ತಿಳಿಸಿದರು.