ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರವಿದೆ. ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ದೂರಿದರು.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ ಬಿಜೆಪಿ ನಾಯಕರ ಹೆಸರು ಕೇಳಿಬಂದರೆ, ಆ ಅಭ್ಯರ್ಥಿಯ ವಿಚಾರಣೆಯನ್ನೇ ಕೈಬಿಡಲಾಗುತ್ತಿದೆ. ಇಡೀ ಹಗರಣವನ್ನು ಮುಚ್ಚಿ ಹಾಕಿ, ಬಿಜೆಪಿ ನಾಯಕರನ್ನು ಬಚಾವ್ ಮಾಡಲೆಂದೇ ಸಿಐಡಿ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿಈ ಹಗರಣದ ಸಮಗ್ರ ತನಿಖೆ ನಡೆಯಬೇಕು. ಆಗ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆದು, ಸತ್ಯಾಂಶ ಹೊರಬರುತ್ತದೆ. ಎಲ್ಲ ರಾಜಕಾರಣಿಗಳ ಮುಖವಾಡ ಕಳಚಿ ಬೀಳುತ್ತದೆ. ಇಲ್ಲದಿದ್ದರೆ, ಸಿಐಡಿ ತನಿಖೆಯ ಗಾಳಕ್ಕೆ ಕೇವಲ ಸಣ್ಣಪುಟ್ಟ ಮೀನುಗಳು ಬಲಿಯಾಗಿ, ದೊಡ್ಡ ತಿಮಿಂಗಿಲಗಳು ತಪ್ಪಿಸಿಕೊಂಡು ಬಿಡುತ್ತವೆ ಎಂದರು.
ಅಶ್ವತ್ಥ್ ನಾರಾಯಣ್ ಸಹೋದರನೇ ಭಾಗಿ: ಬಿಜೆಪಿ ಸರ್ಕಾರದ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸಹೋದರನೇ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಸಚಿವರ ಸಹಕಾರವಿಲ್ಲದೇ ಅವರ ಸಹೋದರನಿಗೆ ಅಕ್ರಮವೆಸಗಲು ಸಾಧ್ಯವೇ?. ಬಹುತೇಕ ಬಿಡಿಎ ಕಾಮಗಾರಿಗಳನ್ನು ಅಶ್ವತ್ಥ್ ನಾರಾಯಣ್ ಸಹೋದರರ ಮಾಲೀಕತ್ವದ ಹೊಂಬಾಳೆ ಕನ್‌ಸ್ಟ್ರಕ್ಷನ್ ನಿರ್ವಹಿಸುತ್ತಿದ್ದು, ಪಿಎಸ್‌ಐ ನೇಮಕಾತಿಯಲ್ಲೂ ಮೂಗು ತೂರಿಸಿರುವುದು ಆತಂಕಕಾರಿ ಎಂದು ಭಾಸ್ಕರ್ ರಾವ್ ಹೇಳಿದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ಮೂರು ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಒದಗಿಸಿಲ್ಲ. ಸತ್ಯ ಹೊರಬರುವುದು ಕಾಂಗ್ರೆಸ್‌ಗೂ ಇಷ್ಟವಿಲ್ಲ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ. ಅಶ್ವತ್ಥ್ ನಾರಾಯಣ್ ಈ ಹಿಂದೆಯೂ ನಕಲಿ ಸರ್ಟಿಫಿಕೇಟ್ ನೀಡಿದ್ದರೆಂದು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ್ದು, ಅವರು ಕೂಡ ಸಾಕ್ಷಿ ಬಹಿರಂಗ ಪಡಿಸುತ್ತಿಲ್ಲ. ಮೂರೂ ಭ್ರಷ್ಟ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ ಎಂದೂ ಆರೋಪಿಸಿದರು.
ಮಾಜಿ ಸಿಎಂ ಪುತ್ರನಿಂದಲೂ ಭಾರೀ ಅಕ್ರಮ: ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಕೂಡ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಮಾಡಿದ್ದಾರೆಂದು ವಕೀಲ ನಿಯೋಗವು ಸಿಐಡಿಗೆ ದೂರು ನೀಡಿದೆ. ಆ ಮುಖ್ಯಮಂತ್ರಿ ಹಾಗೂ ಅವರ ಮಗ ಯಾರೆಂದು ಬಹಿರಂಗವಾಗಬೇಕು. ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಕರ್ನಾಟಕ ಸ್ಟೇಟ್ ನರ್ಸಿಂಗ್ ಕೌನ್ಸಿಲ್‌ನಲ್ಲಿನ ಅಕ್ರಮದಲ್ಲೂ ಭಾಗಿಯಾಗಿರುವ ಕುರಿತು ವರದಿಯಾಗಿದೆ. ಇದು ವೈದ್ಯಕೀಯ ಶಿಕ್ಷಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾವಿ ಸಚಿವರು ಕೂಡ ಅಕ್ರಮದ ಪಾಲುದಾರರಾಗಿರಬಹುದು ಎಂದು ಶಂಕಿಸಿದರು.
ಬೇರೆ ನೇಮಕಾತಿಯಲ್ಲೂ ಅವ್ಯವಹಾರ: ಪಿಎಸ್‌ಐ ನೇಮಕಾತಿ ಪರೀಕ್ಷೆ ಮಾತ್ರವಲ್ಲದೇ ಇತರೆ ಹುದ್ದೆಗಳ ನೇಮಕಾತಿಯಲ್ಲೂ ಭಾರೀ ಆಕ್ರಮ ನಡೆದಿದೆ. ಕೆಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿಸುವುದಾಗಿ ಸಂಸದ ಡಿ.ಕೆ.ಸುರೇಶ್ ಲಂಚ ಪಡೆದು ವಂಚಿಸಿ, ನಂತರ ಹಣ ವಾಪಸ್ ಕೇಳಿದಾಗ ಅಭ್ಯರ್ಥಿ ಮೇಲೆ ಗೂಂಡಾಗಿರಿ ಮಾಡಿದ್ದಾರೆಂದು ಅಭ್ಯರ್ಥಿಯೇ ಆರೋಪ ಮಾಡಿದ್ದಾರೆ. ಸಹಾಯಕ ಉಪನ್ಯಾಸಕರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮವೂ ಬಯಲಾಗಿದೆ ಎಂದರು.
ಇದನ್ನೂ ಓದಿ: ಸರ್ಕಾರ ಬಿದ್ದರೂ ಪರ್ವಾಗಿಲ್ಲ ಕಿಂಗ್ ಪಿನ್ ಹೆಸರು ಹೇಳಿ: ಮಾಜಿ ಮುಖ್ಯಮಂತ್ರಿ HDKಗೆ ಆರಗ ಸವಾಲು