ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಹೆಚ್ಚುವರಿ ಗೊಬ್ಬರ ದಾಸ್ತಾನಿದ್ದು, ಬೇಡಿಕೆ ಹೆಚ್ಚಿರುವ ಕಡೆ ಹೆಚ್ಚಿನ ಸರಬರಾಜು ಮಾಡಲಾಗುತ್ತದೆ ಎಂದು ಕೃಷಿ ಸಚಿವರ ಪರವಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರಸಗೊಬ್ಬರ ಕೊರತೆ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮಗೆ 18 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ವಾರ್ಷಿಕ ಬೇಡಿಕೆ ಇದೆ. ಈಗಾಗಲೇ 9,180 ಟನ್ ಪೂರೈಕೆ ಮಾಡಲಾಗಿದೆ. ಈಗ 5.95 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಎಲ್ಲಿ ಕೊರತೆ ಕಂಡು ಬರಲಿದೆಯೋ ಅಲ್ಲಿ ಪೂರೈಕೆ ಮಾಡಲಾಗುತ್ತದೆ. ನಮ್ಮಲ್ಲಿ ಯೂರಿಯಾ ಗೊಬ್ಬರದ ಕೊರತೆ ಇಲ್ಲ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಹೆಚ್ಚುವರಿ ದಾಸ್ತಾನಿರುವ ಕಡೆಯಿಂದ ಸರಬರಾಜು ಮಾಡಲಾಗುತ್ತದೆ ಎಂದರು.
ನಕಲಿ ಗೊಬ್ಬರ ಮಾರಾಟ: ನಕಲಿ ಡಿಎಪಿ ಗೊಬ್ಬರವನ್ನು ಕೋಲಾರ, ವಿಜಯಪುರ, ಗದಗ ಸೇರಿ ಏಳು ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಕಲಿ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಗ್ಲೈಕೋ ಫಾಸ್ಪೇಟ್ ನಿಷೇಧಕ್ಕೆ ಚಿಂತನೆ: ಭೂಮಿಯ ಫಲವತ್ತತೆ ನಾಶ ಮಾಡುವ ಗ್ಲೈಕೋ ಫಾಸ್ಪೇಟ್ ಕಳೆನಾಶಕ ನಿಷೇಧ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಸದಸ್ಯ ಎಸ್.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಸಾಯನಿಕ ಗೊಬ್ಬರ ಹಾಕಿ ಭೂಮಿ ಆರೋಗ್ಯ ಕೆಟ್ಟಿದೆ. ಇದರಿಂದ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಹಾಗಾಗಿ ಸರ್ಕಾರದಿಂದ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದೆ ಹಾಗಾಗಿ ರೈತಾಪಿ ಸಮುದಾಯವೂ ಸಾವಯವಕ್ಕೆ ಆಸಕ್ತಿ ತೋರಬೇಕು ಎಂದರು.
ನನ್ನ ಕ್ಷೇತ್ರದಲ್ಲೂ ಕೇರಳದಿಂದ ಬಂದು ಶುಂಠಿ ಹಾಕಿದ್ದರು. ಅವರು ವಾಪಸ್ ಹೋದ ನಂತರ ಅಲ್ಲಿ ಬೇರೆ ಬೆಳೆ ಬರುತ್ತಿಲ್ಲ. ಅಷ್ಟು ಪ್ರಮಾಣದ ರಸಗೊಬ್ಬರದಿಂದ ಭೂಮಿ ಹಾಳಾಗಿದೆ. ಇದಕ್ಕೆ ಕಾರಣವಾಗಿರುವ ಗ್ಲೈಕೋ ಫಾಸ್ಪೇಟ್ ಕಳೆನಾಶಕ ನಿಷೇಧ ಕುರಿತು ನಿಯಂತ್ರಣ ನಮಗಿಲ್ಲ, ಕೇಂದ್ರ ನಿರ್ಧಾರ ಮಾಡಬೇಕು, ಬೇರೆ ರಾಜ್ಯದಲ್ಲಿ ನಿಷೇಧ ಮಾಡಿದ ಘಟನೆ ಇದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಾಠದ ಜೊತೆ ಆಟಕ್ಕೆ ಕ್ರೀಡಾಂಗಣ ನಿರ್ಮಾಣ: ಪಾಠದ ಜೊತೆ ಆಟವೂ ಇರಲು ಎಲ್ಲ ಗ್ರಾಮಗಳಲ್ಲೂ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಗವನ್ನು ಮೊದಲ ಬಾರಿ ಕ್ರೀಡೆಗೆ ತೆಗೆದುಕೊಂಡು ಪ್ರತಿ ಹಳ್ಳಿ ಹಳ್ಳಿಯಲ್ಲೂ ನಡೆಸಲು ಕ್ರಮ ವಹಿಸಲಾಗಿದೆ. ಪ್ರತಿ ಹಳ್ಳಿಯಲ್ಲಿಯೂ ಕ್ರೀಡಾಂಗಣ ಮಾಡಲು 504 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಕ್ಕಳ ಸಾಮರ್ಥ್ಯ, ಆಸಕ್ತಿ ಗ್ರಹಿಸಿ ಅಗತ್ಯ ತರಬೇತಿ ನೀಡಲಾಗುತ್ತದೆ ಎಂದರು.
75 ಮಕ್ಕಳಿಗೆ ಒಲಂಪಿಕ್ ಲೆವೆಲ್ ತರಬೇತಿ: ಅಮೃತ ಮಹೋತ್ಸವ ಯೋಜನೆಯಡಿ 75 ಮಕ್ಕಳಿಗೆ ಒಲಂಪಿಕ್ ಮಟ್ಟದ ತರಬೇತಿ ನೀಡಿ ಒಲಂಪಿಕ್ಗೆ ಕಳುಹಿಸಿಕೊಡಲು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ: ಬ್ರಿಟಿಷರ ಕಾಲದ ಪದ್ದತಿಗಳ ಬದಲಾವಣೆ, ಕಂದಾಯ ಇಲಾಖೆ ಸೇವೆ ಸರಳೀಕರಣ: ಅಶೋಕ್
ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಯೋಜನೆಯಡಿ 75 ಮಕ್ಕಳನ್ನು ದತ್ತು ಪಡೆಯಲಾಗಿದೆ. ಅವರಿಗೆ ತಲಾ 5 ಲಕ್ಷ ರೂ. ನೀಡಿ ಒಲಂಪಿಕ್ ತರಬೇತಿಗೆ ಕೊಡಲಾಗಿದೆ. ಈ ಬಾರಿ ಅವರಿಗೆ ತಲಾ 10 ಲಕ್ಷ ಕೊಡಲಾಗುತ್ತಿದೆ ಎಂದರು. ಮಕ್ಕಳಿಗೆ ತರಬೇತಿ ಕೊಡುವುದು ನಮ್ಮ ಕೆಲಸ. ಆದರೆ ಅವರನ್ನು ಯಾವ ದೇಶಕ್ಕೆ ಕಳಿಸಲಾಗುತ್ತದೆ ಎನ್ನುವುದು ನಮ್ಮ ವ್ಯಾಪ್ತಿಗೆ ಬರಲ್ಲ. ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.