ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ನನ್ನ ನಡುವೆ ಅಸಮಾಧಾನವಿಲ್ಲ. ಎಲ್ಲವೂ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದಲ್ಲಿ ಗುರುವಾರ ಮಾತನಾಡಿದ ಅವರು, ಯಾವುದೇ ಕೋಲ್ಡ್ ವಾರ್ ಕೂಡ ನಮ್ಮ ಮಧ್ಯೆ ಇಲ್ಲ. ಡಿ.ಕೆ.ಶಿವಕುಮಾರ್ ಯಾಕೆ ಹಸ್ತಕ್ಷೇಪ ಮಾಡ್ತಾರೆ?. ನಾನು ಯಾವ ಹೈಕಮಾಂಡ್ಗೂ ತಿಳಿಸಿಲ್ಲ. ಸಮಸ್ಯೆ ಇದ್ದರೆ ನಾವೇ ಸರಿಮಾಡಿಕೊಳ್ಳುತ್ತೇವೆ ಎಂದರು.
ಬೆಳಗಾವಿ ಪಾಲಿಕೆಯಲ್ಲಿ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿ, ಬೇಕೆಂದೇ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲವು ದಾಖಲೆಗಳು ನಾಪತ್ತೆಯಾಗಿವೆ. ಯಾಕೆ, ಏನು ಅಂತ ಕೇಳಿದ್ದೇವೆ. ಅಭಯ್ ಪಾಟೀಲ್ ಬೇಕಂತಲೇ ಆರೋಪ ಮಾಡುತ್ತಿದ್ದಾರೆ. ತಮಗೆ ಕನ್ನಡ ಬರಲ್ಲ, ಅಧಿಕಾರಿಗಳು ಮಾಡಿದ್ದಾರೆ ಅನ್ನುತ್ತಾರೆ. ಆ ಕಡತ ಎಲ್ಲಿಗೆ ಹೋಯ್ತು ಎಂದು ಹೇಳಬೇಕಲ್ಲ?. ನೀವ್ಯಾಕೆ ಕಳುಹಿಸಿದ್ದು ಎಂದು ಅಧಿಕಾರಿಗಳ ಮೇಲೆ ಹೋಗ್ತಾರೆ. ಅಧಿಕಾರಿಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಅಭಯ್ ಪಾಟೀಲ್ ಮಾಡುತ್ತಿದ್ದಾರೆ. ಅವರು ಸರ್ಕಸ್ ಕಂಪನಿಯಲ್ಲಿನ ರಿಂಗ್ ಮಾಸ್ಟರ್ ರೀತಿ. ಯಾವ ರೀತಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂಬುದು ಸ್ಥಳೀಯವಾಗಿ ಎಲ್ಲರಿಗೂ ಗೊತ್ತು. ಈಗ ದೂರು ಕೊಟ್ಟಿದ್ದಾರೆ. ತಪ್ಪಿದ್ದರೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.
ಅಭಯ್ ಪಾಟೀಲ್ ಸರ್ಕಾರಕ್ಕೆ ದೂರು ನೀಡಿಲ್ಲ. ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರು ವಿವರ ಕೇಳಿದರೆ ಸರ್ಕಾರ ಮಾಹಿತಿ ನೀಡಲಿದೆ. ಅದೊಂದು ನ್ಯೂಮರಿಕಲ್ ಎರರ್. ರಾಜ್ಯ ಸರ್ಕಾರಕ್ಕೂ ಅವರು ಪತ್ರ ಬರೆದಿಲ್ಲ. ನೇರವಾಗಿ ಯುಪಿಎಸ್ಸಿಗೆ ಪತ್ರ ಬರೆದಿದ್ದಾರೆ. ಅಧಿಕಾರಿಗಳನ್ನು ಹೆದರಿಸುವುದು, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ 2023-24ರ ಆಸ್ತಿ ಕರ ಹೆಚ್ಚಳ ಮಾಡುವಂತೆ ಮೇಯರ್ ಶೋಭಾ ಸೋಮನಾಚೆ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, 2023-24ರ ಆಸ್ತಿ ಕರ ಹೆಚ್ಚಳದ ಪ್ರತಿ ಕಳುಹಿಸಬೇಕಿದ್ದ ಅಧಿಕಾರಿಗಳು, ಲೋಪದೋಷ ಮಾಡಿ 2024-25ರಲ್ಲಿ ತಿದ್ದುಪಡಿಯೊಂದಿಗೆ ಸರ್ಕಾರಕ್ಕೆ ಕಳುಹಿಸಿದ್ದರು. ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಆಡಳಿತಾರೂಢ ಬಿಜೆಪಿ ಸದಸ್ಯರು, ಲೋಪದೋಷ ಮಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೇಯರ್ ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ್ ದೂರು ನೀಡಿದ್ದರು.