ಕೆಆರ್ ಪುರ : ನಾನು ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಭೈರತಿ ಬಸವರಾಜ್ ಹೇಳಿದರು.
ಈ ಕುರಿತಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ಆರೋಪ ಸುಳ್ಳು. ಸತ್ಯಕ್ಕೆ ದೂರವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.
2013ರಲ್ಲೇ ಎಕರೆಗೆ ₹18 ಲಕ್ಷ ನೀಡಿ ಖರೀದಿ ಮಾಡಿದ್ದೇನೆ. ರಾಮಮೂರ್ತಿನಗರ ವಾರ್ಡಿನ ಎನ್ಆರ್ಐ ಬಡಾವಣೆಯಲ್ಲಿ 35 ಎಕರೆ ಖಾಸಗಿ ಭೂಮಿಯಿದೆ. ಈ ವಿಚಾರದ ಬಗ್ಗೆ ಜಮೀನು ಮಾಲೀಕರು ಹಾಗೂ ಕಲ್ಕೆರೆ ಗ್ರಾಮದ ನಿವಾಸಿಗಳ ಸಮ್ಮುಖದಲ್ಲೇ ವಿಚಾರಣೆ ನಡೆಯಲಿ.
ಮಾಧ್ಯಮದವರು ಸತ್ಯಾಂಶವನ್ನು ಆಲಿಸಬೇಕು. ದುರುದ್ದೇಶದಿಂದ ಅನವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ನನ್ನ ಏಳಿಗೆ ಸಹಿಸಲಾಗದೆ ಷಡ್ಯಂತ್ರಗಳು ನಡೆಯುತ್ತಿವೆ. ಅವುಗಳನ್ನು ಕಾನೂನಿನ ಪ್ರಕಾರ ಎದುರಿಸುತ್ತೇನೆ. ನಾನು ನ್ಯಾಯಾಲಯಕ್ಕೆ ತಲೆ ಬಾಗುತ್ತೇನೆ. ಯಾರಿಗೂ ಮೋಸ ಮಾಡಿಲ್ಲ ಎಂಬುದನ್ನು ಸಮರ್ಥಿಸಿಕೊಂಡರು.
ನನ್ನ ಬಗ್ಗೆ ಆರೋಪ ಮಾಡುವ ಮುನ್ನ ಕಲ್ಕೆರೆ ಗ್ರಾಮದ ಹಿರಿಯರು ಮತ್ತು ಜಮೀನು ಮಾಲೀಕರಿದ್ದಾರೆ. ಅವರನ್ನ ವಿಚಾರಿಸಿ ಭೈರತಿ ಬಸವರಾಜ್ ಜಮೀನು ಖರೀದಿ ಮಾಡುವಲ್ಲಿ ಏನಾದರೂ ಮೋಸ ಮಾಡಿದ್ದರಾ ಎಂದು ಕೇಳಿ. ಈ ರೀತಿ ಪದೇಪದೆ ಆಗುವುದು ಮನಸಿಗೆ ತುಂಬಾ ನೋವಾಗಿದೆ ಎಂದರು.
ರಾಜಕೀಯ ಜೀವನದಲ್ಲಿ ಕೈ,ಬಾಯಿಯನ್ನು ಶುದ್ಧವಾಗಿ ಇಟ್ಟುಕೊಂಡು ಬಂದಿದ್ದೀನಿ. ಆದೂರು ಅಣ್ಣೆಯಪ್ಪ ಎಂದೇಳಿಕೊಂಡು ಐದು ಜನ ಅಣ್ಣ- ತಮ್ಮಂದಿರು ತಾವಾಗಿಯೇ ಮುಂದೆ ಬಂದು ಜಮೀನು ಮಾರಾಟ ಮಾಡಿದರು. ಅದನ್ನು ಬಿಟ್ಟು ಯಾವುದೇ ರೀತಿಯ ನಕಲಿ ದಾಖಲೆ, ನಕಲಿ ಸಹಿಯನ್ನು ಮಾಡಿ ಭೂಮಿ ವಶಪಡಿಸಿಕೊಂಡರು ಎಂದು ಆರೋಪ ಮಾಡುತ್ತಿರುವುದು, ಸತ್ಯಕ್ಕೆ ದೂರವಾಗಿದೆ. ನನ್ನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ನಾರಾಯಣ ಸ್ವಾಮಿ ವಿರುದ್ಧ ಗರಂ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸುಮಾರು 63 ಸಾವಿರ ಮತಗಳಿಂದ ಸೋತು ವಿಧಾನ ಪರಿಷತ್ ಚುನಾವಣೆಯಲ್ಲಿ ನಿಲ್ಲಲು ಶಕ್ತಿ ಇಲ್ಲದೆ, ಈ ರೀತಿ ನನ್ನ ವಿರುದ್ಧ ಸುಳ್ಳು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ನಾನು ತಪ್ಪು ಮಾಡಿದರೆ ಜನರ ಮುಂದೆ ತಲೆ ಬಾಗುತ್ತೇನೆ ಎಂದರು.
ಇದನ್ನೂ ಓದಿ: Omicron : ದ.ಕನ್ನಡದ 5 ಮಂದಿ ಸೇರಿ 14ಕ್ಕೆ ಏರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ..