ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದಿದ್ದ ಸುಮಾರು 47 ಸಾವಿರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಅವರಲ್ಲಿ 10 ಸಾವಿರ ಬೈಕ್ಗಳಿಗೆ ಮಾಲೀಕರಿಲ್ಲದೆ ಪೊಲೀಸ್ ಠಾಣಾ ಆವರಣದಲ್ಲಿ ನಿಂತಿವೆ.
ಕೊರೊನಾ ನಿಯಂತ್ರಿಸಲು ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿದ್ದು, ಪೊಲೀಸರು ಜನರ ರಕ್ಷಣೆ ಮಾಡಲು ಹಗಲಿರುಳೆನ್ನದೆ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅನಾವಶ್ಯಕವಾಗಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚರಿಸಿದ ಸುಮಾರು 47 ಸಾವಿರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅವುಗಳ ಪೈಕಿ 10 ಸಾವಿರ ಬೈಕ್ಗಳಿದ್ದು, ಗಾಡಿ ಬಿಡಿಸಿಕೊಂಡು ಬರಲು ಮಾಲೀಕರು ಠಾಣೆ ಬಳಿ ಸುಳಿದಿಲ್ಲ. ಹೀಗಾಗಿ ಇವೆಲ್ಲ ಕದ್ದಿರುವ ವಾಹನಗಳೆಂಬ ಶಂಕೆ ಪೊಲೀಸರಲ್ಲಿ ಮೂಡಿದೆ.
ಪೊಲೀಸರು ಜಪ್ತಿ ಮಾಡಿರುವ ಶೇ. 20 ರಷ್ಟು ವಾಹನಗಳಿಗೆ ಯಾವುದೇ ದಾಖಲೆಗಳಿಲ್ಲ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ಪಾವತಿಸಿಕೊಂಡು ಬಾಂಡ್ ಪಡೆದು ವಾಹನಗಳನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ನಡುವೆ ಹಂತ- ಹಂತವಾಗಿ ವಶಕ್ಕೆ ಪಡೆದ ವಾಹನಗಳ ವಿಲೇವಾರಿ ಮಾಡಲಾಗಿತ್ತು. ಆದರೀಗ ಈ ವಾಹನಗಳ ಅಸಲಿ ಸತ್ಯ ಲಾಕ್ಡೌನ್ ಮುಗಿದ ಮೇಲೆ ಬಯಲಾಗಲಿದೆ ಎನ್ನುತ್ತಾರೆ ಪೊಲೀಸರು.