ಬೆಂಗಳೂರು: ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಮಾಹಿತಿ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಲಭಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿಎಸ್ ಉಗ್ರಪ್ಪ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮಾಹಿತಿ ಬಿಜೆಪಿಗೆ ಇದೆ. ಹಾಗಾಗಿ ಹತಾಶೆಗೆ ಒಳಗಾಗಿರುವ ಅವರು ಅನಗತ್ಯವಾಗಿ ಗದ್ದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದಕ್ಕೆ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ ಎಂದರು.
ಬಿಜೆಪಿ ನಾಯಕರು, ಕಾರ್ಯಕರ್ತರು ಹತಾಶರಾಗಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ರೋಡ್ ಷೋಗೆ ಅಡ್ಡಿ ಮಾಡಿದ್ದಾರೆ. ನಿನ್ನೆ ನಡೆದ ಘಟನೆಯನ್ನು ಖಂಡಿಸುತ್ತಿದ್ದೇವೆ. ಶಿರಾದಲ್ಲೂ ಬಿಜೆಪಿಯವರು ಹಣ ಹಂಚುವ ಮೂಲಕ ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಓಟರ್ ಐಡಿ ಸಂಗ್ರಹಿಸಿ ಹಣ ಹಂಚಿರುವ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ದೂರಿನ ಹಿನ್ನಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದರು.
ಎಸಿಪಿ ರೆಡ್ಡಿ ಹಾಗೂ ನಾಯ್ಡು ವಿರುದ್ಧವೂ ದೂರು ನೀಡಿದ್ದೇವೆ. ಈ ಇಬ್ಬರ ನೇಮಕದ ಹಿಂದೆ ಮುನಿರತ್ನ ಕೈ ಇದೆ. ಇವರಿಬ್ಬರ ವರ್ಗಾವಣೆಗೆ ನಾವು ಒತ್ತಾಯಿಸಿ ದೂರು ಕೊಟ್ಟಿದ್ದೆವು. ಈ ದೂರಿನ ಹಿನ್ನಲೆ ತನಿಖೆಗೆ ಆದೇಶಿಸಿದ್ದಾರೆ ಪ್ರಾಥಮಿಕ ತನಿಖೆಯ ನಂತರ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಧರ್ಮೇಂದ್ರ ಮೀನಾ ಹೇಳಿದ್ದಾರೆ ಎಂದು ತಿಳಿಸಿದರು.