ಬೆಂಗಳೂರು : ಕೊರೊನಾ ಕಾರಣದಿಂದಾಗಿ ಶೈಕ್ಷಣಿಕ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಒಂದು ವೇಳೆ ಕಾಲೇಜುಗಳು ಆರಂಭವಾದರೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರ ಅನಿವಾರ್ಯಯತೆ ಇದೆ.
ಕೊರೊನಾ ಕಾರಣಕ್ಕೆ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ಎಲ್ಲಾ 6.5 ಲಕ್ಷ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡಲಾಗಿದೆ. ಆದರೆ, ಎಲ್ಲಾ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಸದ್ಯಕ್ಕೆ ಕಷ್ಟ ಸಾಧ್ಯ.
ಹೀಗಾಗಿ, ಸೀಟು ಹೆಚ್ಚಳ ಮಾಡುವ ಅವಶ್ಯಕತೆ ಇದೆ. ಹೀಗೆ ಸೀಟು ಹೆಚ್ಚಳ ಮಾಡಿ ಎಲ್ಲಾ ಮೂಲಸೌಕರ್ಯ ಕಲ್ಪಿಸಿದರೂ ಸಹ ರಾಜ್ಯದಲ್ಲಿ ಪದವಿ ತರಗತಿ ಆರಂಭವಾದರೂ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಕಾಡಲಿದೆ.
ಈ ಕುರಿತು ಎಐಎಸ್ಇಸಿ ಸಂಘದ ರಾಜ್ಯ ಕಾರ್ಯದರ್ಶಿ ರಾಜಶೇಖರ್ ವಿ ಎನ್ ಮಾತನಾಡಿದ್ದು, ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಎಲ್ಲರನ್ನೂ ತೇರ್ಗಡೆ ಮಾಡಲಾಗಿದೆ. ಪರಿಣಾಮ 2 ಲಕ್ಷಕ್ಕೂ ಹೆಚ್ಚುವರಿ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಕಾಲೇಜಿನ ಸಂಖ್ಯೆಯಾಗಲಿ, ತರಗತಿ ಸಂಖ್ಯೆಯಾಗಲಿ ಹೆಚ್ಚಾಗಿಲ್ಲ. ಅಷ್ಟೇ ಇದೆ. ಬಹಳ ಆತಂಕದ ವಿಷಯ ಅಂದರೆ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಕೊರತೆ ಎದುರಿಸಬೇಕಾಗುತ್ತೆ ಎಂದರು.
ರಾಜ್ಯದಲ್ಲಿ ಶೇ.70 ರಷ್ಟು ಅತಿಥಿ ಉಪನ್ಯಾಸಕರೇ ಆಧಾರ : ಇವತ್ತಿನ ಕಾಲಘಟ್ಟದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ ಹಾಗೂ ರಾಜ್ಯದಲ್ಲಿ ಶೇ.70ರಷ್ಟು ಅವರಿಂದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ. ಹೀಗೆ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೆ ಹೆಚ್ಚುವರಿಯಾಗಿ ತರಗತಿ ಕೊಠಡಿ ಮಾತ್ರವಲ್ಲದೇ ಉಪನ್ಯಾಸಕರು ಬೇಕಾಗುತ್ತದೆ. ಖಾಯಂ ಉಪನ್ಯಾಸಕರನ್ನೋ ಅಥವಾ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಆದರೆ, ಈತನಕ ಸರ್ಕಾರವಾಗಲಿ, ಇಲಾಖೆಯಾಗಲಿ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.
ಹೆಚ್ಚಿನ ಒತ್ತಡ ಬೀರುವ ಸಾಧ್ಯತೆ : ಹೆಚ್ಚುವರಿಯಾಗಿ ಉಪನ್ಯಾಸಕರ ನೇಮಕಾತಿ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹೀಗಾಗಿ, ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಬೇಕಿದೆ. ಕಳೆದ ವರ್ಷವೂ ಅತಿಥಿ ಉಪನ್ಯಾಸಕರ ಸೇವೆಯನ್ನ ಮುಂದುವರೆಸುವುದು ಬಿಟ್ಟು, ಸೇವೆಯನ್ನ ಕಡಿತಗೊಳಿಸಿ ಅವರನ್ನು ಕೈಬಿಟ್ಟರು. ಪರಿಣಾಮ ದೊಡ್ಡಮಟ್ಟದ ಸಾವಿರಾರು ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾದರು ಎಂದರು.
ಅತಿಥಿ ಉಪನ್ಯಾಸಕರ ಅನಿರ್ವಾಯ ಇದೆ : ರಾಜ್ಯದಲ್ಲಿ 4500 ಖಾಯಂ ಉಪನ್ಯಾಸಕರು, 14,400 ಅತಿಥಿ ಉಪನ್ಯಾಸಕರಿದ್ದಾರೆ. ಇರುವ ಸಾವಿರ ಸಂಖ್ಯೆಯಲ್ಲಿ ಇದೀಗ ಪಾಸ್ ಆಗಿರುವ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಯಾರು ಎಂಬ ಪ್ರಶ್ನೆ ಕಾಡಿರದು. ಸದ್ಯ ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜೊತೆಗೆ ಆರ್ಥಿಕ ಇಲಾಖೆಯ ಅನುಮೋದನೆಗೂ ಅನುಮತಿ ಬೇಕಿದ್ದು, ಸದ್ಯ ಕಾಲೇಜು ದಾಖಲಾತಿ ನಡೆಯುತ್ತಿದೆ ಎಂದರು.