ಬೆಂಗಳೂರು : ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಅಲ್ಪಸಂಖ್ಯಾತ ಘಟಕದ ಸಭೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ ಅದನ್ನು ನೋಡಿಕೊಳ್ಳೋಕೆ ಉಭಯ ನಾಯಕರು ಇದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದಾರೆ. ಇದೆಲ್ಲವನ್ನು ಅವರು ಸರಿ ಮಾಡುತ್ತಾರೆ ಎಂದರು.ಜಿಂದಾಲ್ ವಿಚಾರಕ್ಕೆ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದರೆ ಅದನ್ನು ಸರಿ ಮಾಡುವ ಶಕ್ತಿ ಅವರ ನಾಯಕರಿಗಿದೆ. ಎಲ್ಲ ಸರಿ ಮಾಡುತ್ತಾರೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಪುನರುಚ್ಚರಿಸಿದರು.
ನಮ್ಮ ಪಕ್ಷದ 37 ಶಾಸಕರು ಭದ್ರವಾಗಿದ್ದಾರೆ. ಕಾಂಗ್ರೆಸ್ ನ 78 ಜನ ಶಾಸಕರು ಭದ್ರವಾಗಿ ಇದ್ದಾರೆ. ಸರ್ಕಾರಕ್ಕೆ ಏನು ಸಮಸ್ಯೆ ಇಲ್ಲ. ಸರ್ಕಾರ ಸುಭದ್ರವಾಗಿ ಇರುತ್ತದೆ ಎಂದ್ರು. ಮಾಧ್ಯಮಗಳಿಗೆ ಸರ್ಕಾರ ಬಿಳೋದು ನೋಡುವ ಆಸೆ. ಆದರೆ ನಿಮ್ಮ ಆಸೆ ಈಡೇರೋದಿಲ್ಲ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗದಂತೆ ನಾವು ಕೆಲಸ ಮಾಡುತ್ತೇವೆ. ಸರ್ಕಾರಕ್ಕೆ ಸಮಸ್ಯೆ ಆಗದಂತೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ನಾಳೆ ಬೆಂಗಳೂರಿನ 28 ಕ್ಷೇತ್ರಗಳ ಮುಖಂಡರು ಹಾಗೂ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಸಭೆ ಕರೆದಿದ್ದೇನೆ ಎಂದು ತಿಳಿಸಿದ್ರು. ಆಗಸ್ಟ್ ನಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸುಮಾರು 50 ಸಾವಿರ ಮಂದಿಯನ್ನು ಸೇರಿಸಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದ್ರು.