ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಆದಿಲ್ ಪಾಷಾ ಬಂಧಿತ ಆರೋಪಿ. ಬೆಂಗಳೂರಿನ ಮೆಜೆಸ್ಟಿಕ್ ನಿಂದ ಶಿವಮೊಗ್ಗಕ್ಕೆ ಹೋಗುವ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಾಲತಿ ಎಂಬುವರು ಹತ್ತಿದ್ದರು. ಮಂದೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ಯಶವಂತಪುರದಲ್ಲಿ ನಿಲ್ಲಿಸಿದ್ದು, ಇಬ್ಬರು ಅಪರಿಚಿತ ಹೆಂಗಸರು ಒಂದು ಸಣ್ಣ ಮಗು ಮತ್ತು ಏಳು ವರ್ಷದ ಹುಡುಗಿಯೊಂದಿಗೆ ಬಸ್ ಹತ್ತಿದ್ದರು. ಆನಂತರ ಅವರು ಮಾಲತಿಯವರ ಹತ್ತಿರ ಕುಳಿತುಕೊಂಡು ಅವರ ಬ್ಯಾಗಿನ ಮೇಲೆ ಚಿಲ್ಲರ ಬೀಳಿಸಿ ಎತ್ತಿಕೊಳ್ಳುವ ನೆಪದಲ್ಲಿ 155 ಗ್ರಾಂ ಚಿನ್ನಾಭರಣ ಎಗರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಕೇಸ್ ಸಂಬಂಧ ಆದಿಲ್ ಪಾಷಾ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯೇ ಇಬ್ಬರು ಹೆಂಗಸರನ್ನು ಸಣ್ಣ ಮಕ್ಕಳ ಜೊತೆಯಲ್ಲಿ ಬಸ್ಸು ಹತ್ತಿಸಿ, ಒಂಟಿಯಾಗಿ ಕುಳಿತಿರುವ ಹೆಂಗಸರ ಪಕ್ಕದ ಸೀಟಿನಲ್ಲಿ ಕೂರಿಸಿ ಬ್ಯಾಗಿನ ಮೇಲೆ ಚಿಲ್ಲರೆ ಬೀಳಿಸಿ, ನಂತರ ಅದನ್ನು ತೆಗೆದುಕೊಳ್ಳುವ ನೆಪದಲ್ಲಿ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ತದನಂತರ ಹೆಂಗಸರು ಆದಿಲ್ ಪಾಷಾಗೆ ಹಣ ಕೊಟ್ಟು ತಾವೂ ಹಂಚಿಕೊಳ್ಳುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಸದ್ಯ ಮಹಿಳೆಯರಿಬ್ಬರೂ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಆರೋಪಿ ವಿರುದ್ಧ ಆರ್ಎಂಸಿ ಯಾರ್ಡ್, ಹೆಚ್ಎಲ್, ಕೊಡಿಗೆಹಳ್ಳಿ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಮತ್ತೆ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಸದ್ಯ ಆರೋಪಿಯಿಂದ 10 ಲಕ್ಷ ರೂಪಾಯಿ ಬೆಲೆಬಾಳುವ 155 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ತಲೆಮರೆಸಿಕೊಂಡ ಆರೋಪಿಗಳ ಶೋಧ ಮುಂದುವರೆಸಿದ್ದಾರೆ.