ಬೆಂಗಳೂರು: ಕೋವಿಡ್ ಬಿಕ್ಕಟ್ಟಿನಿಂದ ಈ ವರ್ಷ ಜಾರಿಯಾಗಿದ್ದ ಲಾಕ್ಡೌನ್ ಮುಗಿದ ಬಳಿಕ ರಾಜ್ಯದಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ರಾಜ್ಯಾದ್ಯಂತ 807 ಕಳ್ಳತನ ಪ್ರಕರಣಗಳು ವರದಿಯಾಗಿವೆ. ಜೂನ್‌ನಲ್ಲಿ ಇವುಗಳ ಸಂಖ್ಯೆ 1,250ಕ್ಕೇರಿದೆ. ಜುಲೈನಲ್ಲಿ 1,627 ಪ್ರಕರಣಗಳು, ಆಗಸ್ಟ್‌ನಲ್ಲಿ 1,672 ಪ್ರಕರಣಗಳು ಮತ್ತು ಸೆಪ್ಟೆಂಬರ್‌ನಲ್ಲಿ 1,580 ಪ್ರಕರಣ ವರದಿಯಾಗಿವೆ.
1. ಕೋವಿಡ್ ಸಂಕಟದಿಂದ ಪಾರಾಗಲು ದುಷ್ಕೃತ್ಯ
ಈ ವರ್ಷದ ಮೊದಲ ನಾಲ್ಕು ತಿಂಗಳ ಅಂಕಿ-ಅಂಶಗಳ ಪ್ರಕಾರ ಜನವರಿಯಲ್ಲಿ 1,366 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಫೆಬ್ರವರಿಯಲ್ಲಿ 1,337 ಪ್ರಕರಣ, ಮಾರ್ಚ್‌ನಲ್ಲಿ 1,573 ಪ್ರಕರಣ ಮತ್ತು ಏಪ್ರಿಲ್‌ನಲ್ಲಿ 1,177 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ. ಲಾಕ್‌ಡೌನ್‌ನಿಂದಾಗಿ ಅದೆಷ್ಟೋ ಜನರು ಕೆಲಸ ಕಳೆದುಕೊಂಡಿದ್ದರು. ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಸಂಕಟದಿಂದ ಹೊರಬರಲು ಅಕ್ಷರಸ್ಥ ಜನರೂ ಸೇರಿದಂತೆ ವಿವಿಧ ವರ್ಗದವರು ಕಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
2. ಜಾಮೀನು ಪಡೆದು ಹೊರಬಂದ್ರೂ ಮತ್ತದೇ ಚಾಳಿ
ಅಲ್ಲದೆೇ, ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿಗಳೂ ಸಹ ಕಾನೂನು ಹೋರಾಟ ನಡೆಸಲು ಹಣಕಾಸು ಸರಿದೂಗಿಸಲೆಂದು ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ವಾಹನ ಕಳ್ಳತನ, ಕನ್ನಾ ಕಳವು ಮತ್ತು ಸರ್ವೇಂಟ್ ಥೆಫ್ಟ್ ಪ್ರಕರಣಗಳೇ ಹೆಚ್ಚಾಗಿ ವರದಿಯಾಗಿವೆ. ಆರ್ಥಿಕ ಬಿಕ್ಕಟ್ಟು, ಉದ್ಯೋಗ ಕೊರತೆ ಅಥವಾ ಕಡಿಮೆ ಸಂಭಾವನೆಯಿಂದ ನರಳಿರುವ ಜನರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
3. ಮಕ್ಕಳ ಶಾಲಾ ಶುಲ್ಕ ಭರಿಸಲು ಕಳ್ಳತನ
ಮತ್ತೊಂದೆಡೆ, ತಮ್ಮ ಮಕ್ಕಳ ಶಾಲಾ ಶುಲ್ಕ ಭರಿಸಲು ಕೆಲವರು ಕಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷದ ಮೊದಲ 10 ತಿಂಗಳಲ್ಲಿ 7,402 ದ್ವಿಚಕ್ರ ವಾಹನಗಳು ಮತ್ತು 250 ಕಾರುಗಳನ್ನು ಕಳವು ಮಾಡಲಾಗಿದೆ. ಮೇ ತಿಂಗಳಲ್ಲಿ ಕಡಿಮೆ 425 ದ್ವಿಚಕ್ರ ವಾಹನಗಳು ಮತ್ತು ಐದು ಕಾರುಗಳು ಕಳ್ಳತನವಾಗಿವೆ. ಇದೇ ತಿಂಗಳಲ್ಲಿ ಮನೆ ಕಳ್ಳತನಗಳು- 37 ಮತ್ತು ಸರ್ವೇಂಟ್ ಥೆಫ್ಟ್ 13 ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಹೆಚ್ಚು 886 ಗರಿಷ್ಠ ಸಂಖ್ಯೆಯ ದ್ವಿಚಕ್ರ ವಾಹನ ಕಳವು ಮಾಡಲಾಗಿದೆ.