ಬೆಂಗಳೂರು: ಕಳ್ಳತನವನ್ನೇ ಫುಲ್‌ಟೈಮ್ ವೃತ್ತಿಯನ್ನಾಗಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಜಬಿವುದ್ದೀನ್, ಮೊಹಮದ್ ಮೆಹ್ತಾಬ್ ಹಾಗೂ ಜಗದೀಶ್ ಬಂಧಿತರು.
ಜಬಿವುದ್ದೀನ್ ಮತ್ತು ಮೆಹ್ತಾಬ್ ಸಂಜೆ ವೇಳೆ ವಾಯುವಿಹಾರ ಮಾಡುವ ವೃದ್ಧರನ್ನು ಗುರಿಯಾಗಿಸಿಕೊಂಡು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಅಂಥಹದೇ ಸರಗಳ್ಳತನ ಪ್ರಕರಣವನ್ನು ಬೆನ್ನತ್ತಿದ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರೂಢಿಗತ ಕಳ್ಳರಾಗಿರುವ ಈ ಆರೋಪಿಗಳು 12 ವರ್ಷಗಳಿಂದ ಕಳ್ಳತನದಲ್ಲಿ ಸಕ್ರಿಯರಾಗಿದ್ದುಕೊಂಡು 75ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಂಗತಿ ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ 26.5 ಲಕ್ಷ ಮೌಲ್ಯದ 503 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಚಿನ್ನ ಅಡವಿಡಲು ಬಂದು ಸಿಕ್ಕಿಬಿದ್ದ: ಕದ್ದ ಚಿನ್ನಾಭರಣ ಅಡಮಾನವಿಡಲು ಬಂದಿದ್ದ ಕಳ್ಳನನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಬಂಧಿತ ಆರೋಪಿ. ಅಕ್ಟೋಬರ್ 22ರಂದು ಮಲ್ಲೇಶ್ವರಂ 18ನೇ ಕ್ರಾಸ್ನಲ್ಲಿರುವ ಚಿನ್ನದಂಗಡಿಗೆ ಬಂದಿದ್ದ ಆರೋಪಿಯನ್ನು ಗಮನಿಸಿದ್ದ ಅಂಗಡಿ ಮಾಲೀಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕಳವು ಮಾಡಿರುವ ಚಿನ್ನಾಭರಣ ಎಂದು ತಿಳಿದುಬಂದಿದೆ.
ಆರೋಪಿ 2014ರಿಂದಲೂ ಸಂಜಯನಗರ, ಆರ್.ಟಿ.ನಗರ, ವಿದ್ಯಾರಣ್ಯಪುರ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿನ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಯಿಂದ ಸುಮಾರು ₹6.5 ಲಕ್ಷ ಮೌಲ್ಯದ 122 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮಹಿಳೆಯ ಚಿನ್ನದ ಸರ ಕದ್ದು ಪರಾರಿ, ಆರೋಪಿಗಳು ಸೆರೆ: ಮಹಿಳೆಯೊಬ್ಬರ ಕತ್ತಿನಿಂದ ಸರ ದೋಚಿ ಪರಾರಿಯಾಗಿದ್ದ ಇಬ್ಬರನ್ನು 24 ಗಂಟೆಯೊಳಗೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ (ಅಕ್ಟೋಬರ್-4-2023) ಯಶಸ್ವಿಯಾಗಿದ್ದರು. ಹೊಸಪೇಟೆ ನಿವಾಸಿಗಳಾದ ಆಟೋ ಚಾಲಕ ಶ್ರೀನಿವಾಸ್ ಮತ್ತು ಆತನ ಸ್ನೇಹಿತ ವೆಂಕೋಬ ಬಂಧಿತರು. ಹೊರವಲಯದ ಕೊಂಡಾನಾಯಕನಹಳ್ಳಿ ಮಹಿಳೆ ವರಮಹಾಲಕ್ಷ್ಮಿ ಅ.1ರಂದು ಆಟೋದಲ್ಲಿ ಚರ್ಚ್ಗೆ ಹೋಗಿದ್ದರು. ಅದೇ ಆಟೋದಲ್ಲಿ ಮರಳಿ ಮನೆಗೆ ಹೋಗುವಾಗ ಆರೋಪಿ ಶ್ರೀನಿವಾಸ್ ಆತನ ಸ್ನೇಹಿತ ವೆಂಕೋಬ ಎಂಬವನನ್ನು ಕರೆಸಿಕೊಂಡಿದ್ದಾನೆ. ಇಬ್ಬರೂ ಸೇರಿ ಆಟೋದಲ್ಲಿ ಮಹಿಳೆಯನ್ನು ನಗರದ ಹೊರವಲಯದ ಜೋಳದರಾಶಿ ಗುಡ್ಡದ ಬಳಿ ಕರೆದೊಯ್ದು ಸರ ಕಸಿದು ಪರಾರಿಯಾಗಿದ್ದರು.
ಇದನ್ನೂ ಓದಿ: ಹೊಸಪೇಟೆ: ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳು 24 ಗಂಟೆಯೊಳಗೆ ಅಂದರ್