ಬೆಂಗಳೂರು: ಮನೆ ಕೆಲಸದವರು ಉದ್ಯಮಿಯೊಬ್ಬರ ಮಗಳನ್ನು ಬೆದರಿಸಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಕೋರಮಂಗಲದ 4ನೇ ಬ್ಲಾಕ್ ನಿವಾಸಿ ಉದ್ಯಮಿ ಮದನ್ ರೆಡ್ಡಿ ಎಂಬವರ ಮನೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
ವಿವರ:
ಮದನ್ ರೆಡ್ಡಿ ಕುಟುಂಬ ಸಮೇತರಾಗಿ ಹೊಸೂರಿನಲ್ಲಿರುವ ತಮ್ಮ ಫಾರಂ ಹೌಸ್ಗೆ ಹೋಗಿದ್ದರು. ಈ ವೇಳೆ ಮಗಳು ಮನೆಯಲ್ಲೇ ಉಳಿದುಕೊಂಡಿದ್ದರು. ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ 3 ಮಂದಿ ಮನೆ ಕೆಲಸದವರು ಮುಂಜಾನೆ 5 ಗಂಟೆಗೆ ಮೊದಲ ಮಹಡಿಯಲ್ಲಿದ್ದ ತಿಜೋರಿಯಲ್ಲಿಟ್ಟಿದ್ದ ಹಣ ಕದಿಯುತ್ತಿದ್ದರಂತೆ. ಈ ಬಗ್ಗೆ ಶಬ್ದ ಕೇಳಿ ಮದನ್ ರೆಡ್ಡಿ ಮಗಳು ಬಂದು ನೋಡಿದಾಗ ಮನೆ ಕಳ್ಳತನ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆತಂಕಗೊಂಡು ಜೋರಾಗಿ ಕಿರುಚಿದಾಗ, ಬೆದರಿಸಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಳ್ಳತನದ ವೇಳೆ ಲಾಕರ್ ಒಡೆದಿರಲಿಲ್ಲ, ಅದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿತ್ತು ಎನ್ನಲಾಗಿದೆ.
ಇದಾದ ಬಳಿಕ ಮದನ್ ರೆಡ್ಡಿ ಮಗಳು ಪಾಲಕರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಮದನ್ ರೆಡ್ಡಿ ನೆರೆ-ಹೊರೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಮನೆ ಕೆಲಸದವರಿಗಾಗಿ ಶೋಧ ನಡೆಸುತ್ತಿದ್ದಾರೆ.