ಬೆಂಗಳೂರು : ನಗರದಲ್ಲಿ ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಕಳ್ಳರ ಹಾವಳಿ ಶುರುವಾಗಿದ್ದು, ಶಿವಾನಂದ ವೃತ್ತದ ಚಿರಾಗ್ ಜ್ಯುವೆಲ್ಲರಿ ಶಾಪ್ಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.
ತಡರಾತ್ರಿ ಗ್ಯಾಸ್ ಕಟರ್ ಮೂಲಕ ಶಟರ್ ಮುರಿದು ಒಳ ನುಗ್ಗಿದ ಕಳ್ಳರು, ತಮ್ಮ ಕೈಚಳಕ ತೋರಿದ್ದಾರೆ. ಮುಂಜಾನೆ ಮಾಲೀಕ ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಹೊರ ಭಾಗದ ಸಿಸಿ ಕ್ಯಾಮರಾದ ವೈರ್ ಕತ್ತರಿಸಿ ಕೃತ್ಯ ಎಸಗಲಾಗಿದೆ.
ಕಳೆದ 15 ವರ್ಷಗಳಿಂದ ಗಂಜೇಂದ್ರ ಎಂಬುವವರು ಈ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದಾರೆ. ಖದೀಮರು ಬೆಳ್ಳಿ ಆಭರಣಗಳನ್ನು ಮುಟ್ಟದೇ ಕೇವಲ ಚಿನ್ನದ ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ. ಈ ಬಗ್ಗೆ ಹೈ ಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.