ಬೆಂಗಳೂರು: ವಿಶ್ವವೇ 370 ವಿಧಿ ರದ್ಧತಿ ನಿರ್ಧಾರದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದ್ದು, ಪಾಕಿಸ್ತಾನ ಈ ವಿಚಾರವಾಗಿ ಈಗ ಏಕಾಂಗಿಯಾಗಿದೆಯೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ ಒಂದು ದೇಶ ಒಂದು ಸಂವಿಧಾನ, 370ನೇ ವಿಧಿ ರದ್ದತಿ ಬಗ್ಗೆ ಜನ ಜಾಗರಣ ಸಭೆ ಉದ್ದೇಶಿಸಿ ಮಾತನಾಡಿದ ನಡ್ಡಾ, ಈಗ ದೇಶ ಬದಲಾಗಿದ್ದು, ವಿಶ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಮ್ಮು ಕಾಶ್ಮೀರದ ಸಂಬಂಧ ಈ ನಿರ್ಧಾರ ದೂರಗಾಮಿಯಾಗಲಿದೆಯೆಂದು ವಿವರಿಸಿದರು.
370ನೇ ವಿಧಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುತ್ತೆ ಅನ್ನೋ ಸುಳ್ಳನ್ನು ಹಬ್ಬಿಸಲಾಗಿತ್ತು. ಇದೊಂದು ಐತಿಹಾಸಿಕ ಸುಳ್ಳಾಗಿದ್ದು, ತಾತ್ಕಾಲಿಕವಾಗಿ ಮಾತ್ರ ವಿಶೇಷ ಸ್ಥಾನಮಾನ ಕಾಶ್ಮೀರಕ್ಕೆ ಕೊಡಲಾಗಿತ್ತು. ಈ ಸ್ಥಾನಮಾನವನ್ನು ಬದಲಿಸಬಹುದಾಗಿತ್ತು. ಆದರೆ, ಈವರೆಗೆ ಆ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲವೆಂದು ಆರೋಪಿಸಿದರು. ಜೊತೆಗೆ, 370ನೇ ವಿಧಿ ಭಾರತದ ಸಂವಿಧಾನದ ವಿರುದ್ಧವಾಗಿತ್ತು. ಇದರಿಂದ ನಮ್ಮ ನೆಲದ 104 ಕಾನೂನುಗಳು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗುತ್ತಿರಲಿಲ್ಲ. ಈಗ ವಿಧಿ ರದ್ಧತಿಯಾದ ಬಳಿಕ ಎಲ್ಲ ಕಾನೂನು ಅನ್ವಯವಾಗಲಿದೆ. ಯಾರು ಬೇಕದಾರೂ ಚುನಾವಣೆಗೆ ನಿಲ್ಲಬಹುದಾಗಿದೆಯೆಂದು ತಿಳಿಸಿದರು.
ಪಿಒಕೆ ಕೂಡ ನಮ್ಮ ವಶವಾಗುತ್ತದೆ: ಮುಂದಿನ ದಿನಗಳಲ್ಲಿ ಪಿಒಕೆ ಕೂಡ ಭಾರತದ ವಶವಾಗಲಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಸಭೆ ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದು ಎರಡೇ ಹೆಸರು, ಒಂದು ಮೋದಿ, ಇನ್ನೊಂದು ಅಮಿತ್ ಶಾ. ನೆಹರು ತೀರ್ಮಾನಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗುತ್ತದೆ ಅನ್ನೋದನ್ನು ತಿಳಿದು ಶ್ಯಾಮ್ ಪ್ರಕಾಶ್ ಮುಖರ್ಜಿ ಸಂಪುಟದಿಂದ ಹೊರ ಬಂದಿದ್ದರು. ಅಂದಿನಿಂದ ಹೋರಾಟ ನಡೆಯುತ್ತಲೇ ಇತ್ತೆಂದು ವಿವರಿಸಿದರು.
ಸಂಪೂರ್ಣ ಬಹುಮತ ಬಂದ ಕಾರಣ 370 ವಿಧಿಯನ್ನು ತೆಗೆದುಹಾಕಲು ಸಾಧ್ಯವಾಯ್ತು. ಕಾಶ್ಮೀರ ಶಾರದೆಯ ನಾಡು, ಪಂಡಿತರ ನಾಡು. ಆದರೆ, ಅದು ಭಯೋತ್ಪಾದಕರ ನಾಡಾಗಿತ್ತು. ಯಾರು ರಾಷ್ಟ್ರ ಭಕ್ತರಿದ್ದಾರೋ ಅವರು ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಯಾರು ರಾಷ್ಟ್ರ ವಿರೋಧಿಗಳಿದ್ದಾರೋ ಅವರೆಲ್ಲಾ ವಿರೋಧಿಸಿದ್ದಾರೆಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ಸಂಸದ ಪಿ ಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕ ಅರವಿಂದ ಲಿಂಬಾವಳಿ, ರವಿ ಕುಮಾರ್ ಭಾಗಿಯಾಗಿದ್ದರು.