ಬೆಂಗಳೂರು : ನನಗೂ ಸಿಡಿಯಲ್ಲಿರುವ ಯುವತಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿರುವ ಶಿವಕುಮಾರ್ ಅವರು, ರಮೇಶ್ ಜಾರಕಿಹೊಳಿ ಹೇಳಿಕೆ ನಂತರ ತಮ್ಮ ಪ್ರತಿಕ್ರಿಯೆ ನೀಡಿದ್ದು, ಯುವತಿ ಕುಟುಂಬದವರು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ.
ಏನೋ ಅವರಿಗೆ ಸಮಸ್ಯೆ ಇರಬಹುದು, ಮಾತನಾಡುತ್ತಾರೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲು ಆಗುವುದಿಲ್ಲ, ಉತ್ತರಿಸಲು ಸಾಧ್ಯವಿಲ್ಲ ಎಂದರು. ಕಾನೂನು ಇದೆ, ಅಧಿಕಾರಿಗಳಿದ್ದಾರೆ, ತನಿಖೆ ನಡೆಯುತ್ತಿದೆ.
ಅವರು ಎಲ್ಲವನ್ನು ವಿಚಾರಣೆ ನಡೆಸಿ ತೀರ್ಮಾನಕ್ಕೆ ಬರುತ್ತಾರೆ. ಇದು ಅವರ ಖಾಸಗಿ ಸಮಸ್ಯೆ, ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಒಂದು ಮಾತು, ಇಂದು ಒಂದು ಮಾತು, ನಾಳೆ ಬೇರೆ ಮಾತನಾಡುತ್ತಾರೆ. ಇದಕ್ಕೆಲ್ಲಾ ಉತ್ತರ ನೀಡಿಕೊಂಡು ನಾನು ಕೂರುವುದಿಲ್ಲ, ನನಗೆ ಇದರ ಅವಶ್ಯಕತೆಯೂ ಇಲ್ಲ. ಕಾನೂನಿದೆ ಹಾಗೂ ಅವರದೇ ಸರ್ಕಾರ ಇದೆ. ಯಾವ ರೀತಿ ಬೇಕಾದರೂ ತನಿಖೆ ನಡೆಸಿಕೊಳ್ಳಲಿ ಎಂದರು.
ಪೋಷಕರ ಆರೋಪದ ಕುರಿತು ಮಾತನಾಡಿ ಅವರು, ನನಗೆ ಯಾವ ಮಾಹಿತಿಯೂ ಇಲ್ಲ, ನಾನು ಯಾರನ್ನೂ ಭೇಟಿಯಾಗಿಲ್ಲ, ಯಾರೂ ನನ್ನನ್ನು ಸಹ ಭೇಟಿ ಮಾಡಿಲ್ಲ. ಇದೇ ವಿಚಾರವನ್ನು ಇಂದು ಬೆಳಗ್ಗೆ ಹಾಗೂ ಮೊನ್ನೆ ತಿಳಿಸಿದ್ದೇನೆ ಎಂದು ಹೇಳಿದರು.