ಬೆಂಗಳೂರು: ಚುನಾವಣಾ ಕೆಲಸದ ನಡುವೆಯೇ ಬಿಬಿಎಂಪಿ ಅಧಿಕಾರಿಗಳು ಕಾನೂನು ಪಾಲಿಸದವರಿಗೆ ದಂಡ ಹಾಕಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಾಲ್ಗಳ ದಿಢೀರ್ ಪರಿಶೀಲನೆಗೆ ತೆರಳಿದ್ದ ಪಾಲಿಕೆ ವೈದ್ಯಾಧಿಕಾರಿಗಳು ನಿನ್ನೆ ಕೆಫೆವೊಂದರ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ.
ಪಶ್ಚಿಮ ವಲಯದ ವಾರ್ಡ್ 35 ರಲ್ಲಿ ಪರಿಶೀಲನೆ ವೇಳೆ, ಎಂ ಎಸ್ ರಾಮಯ್ಯ ಆಸ್ಪತ್ರೆ ಬಳಿ ಇರುವ ಕೆಫೆ ಕಾಫಿ ಡೇ ಮಳಿಗೆ ಮೇಲೆ ದಾಳಿ ನಡೆದಿದೆ. ಅಲ್ಲಿ ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಲು ಅನುವು ಮಾಡಿ ಕೊಟ್ಟಿರುವುದಲ್ಲದೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಹಾಗೂ ಕಸ ವಿಂಗಡಣೆ ಮಾಡದಿರುವುದು ಕಂಡು ಬಂದಿದೆ ಎನ್ನಲಾಗ್ತಿದೆ. ಆರೋಗ್ಯ ಇಲಾಖೆಯಿಂದ ಮಳಿಗೆಯನ್ನು ಮುಚ್ಚಿಸಿ 12,800/- ರೂ. ದಂಡ ವಿಧಿಸಿ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ.
ಬೆಂಗಳೂರಲ್ಲಿ 200ಕ್ಕೂ ಅಧಿಕ ಈ ರೀತಿಯ ಮಳಿಗೆಗಳಿದ್ದು ಈ ಎಲ್ಲಾ ಸ್ಥಳಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸುವಂತೆ ಮತ್ತು ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಎಲ್ಲಾ ಉದ್ದಿಮೆಯವರು ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕಸ ವಿಂಗಡಣೆ ಮಾಡಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ.