ಬೆಂಗಳೂರು: ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಅನ್ನೋ ಹಾಗೆ ಎಟಿಎಂಗೆ ಹಣ ತುಂಬುವವರೇ ದುಡ್ಡಿನ ಆಸೆಗೆ ಬಿದ್ದು ಈಗ ಜೈಲು ಪಾಲಾಗಿದ್ದಾರೆ.
ಮಡಿವಾಳದಲ್ಲಿರುವ ಸೆಕ್ಯೂರ್ ವ್ಯಾಲ್ಯೂ ಅನ್ನೋ ಎಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಎಟಿಎಂ ಮಷಿನ್ಗಳಿಗೆ ಹಣ ತುಂಬಿಸುವ ಮತ್ತು ಮಷಿನ್ ಸರಿಪಡಿಸುವ ಕಸ್ಟೋಡಿಯನ್ ಕೆಲಸ ಮಾಡುತ್ತಿದ್ದ ಈ ಇಬ್ಬರು ಆರೋಪಿಗಳು, ಇದೇ ತಿಂಗಳು ಶಾಂತಿನಗರದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಆರ್.ಬಿ.ಎಲ್ ಬ್ಯಾಂಕ್ನ ಎಟಿಎಂ ರಿಪೇರಿ ಮಾಡುವ ನೆಪದಲ್ಲಿ 51,30,000 ಲಕ್ಷ ನಗದು ಹಾಗೂ ಐಸಿಐಸಿಐ ಬ್ಯಾಂಕ್ ಎಟಿಎಂನಿಂದ 47,83,000 ಲಕ್ಷ ಹಣ ಕಳ್ಳತನ ಮಾಡಿ ತಲೆಮರೆಸಿಕೊಂಡಿರುತ್ತಾರೆ.
ಈ ಬಗ್ಗೆ ಬ್ಯಾಂಕ್ನವರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಹಣದ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲ ತೀರಿಸಲು ಹಾಗೂ ಮೋಜು ಮಸ್ತಿಗಾಗಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಗೆ ಖಾಕಿ ಭಯ ಹುಟ್ಟಿಸಿದ್ದಾರೆ.