ಬೆಂಗಳೂರು: ಮನೆಗಳ್ಳತನ ಮಾಡಿದ್ದ ಜಾಗದಲ್ಲಿ ಸಿಕ್ಕ ಬೆರಳಚ್ಚಿನ ಗುರುತಿನ ಸಹಾಯದಿಂದ ಖದೀಮನನ್ನು ಬಂಧಿಸುವಲ್ಲಿ ಸಿ.ಕೆ.ಅಚ್ಚುಕಟ್ಟು ಪೊಲೀಸರು ಯಶಸ್ವಿಯಾಗಿದ್ದಾರೆ.
ಖಲೀಲ್ ಬಂಧಿತ ಆರೋಪಿ. ವಿಲಾಸಿ ಜೀವನ ನಡೆಸಲು ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದ ಈತ, ಜುಲೈ 6 ರಂದು ಬನಶಂಕರಿಯಲ್ಲಿರುವ ಮನೆಗೆ ಹಾಡಹಾಗಲೇ ನುಗ್ಗಿ ಬೀರುವಿನಲ್ಲಿದ್ದ 230 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಳ್ಳತನ ಕೃತ್ಯ ನಡೆದ ಬಳಿಕ ಘಟನಾ ಸ್ಥಳಕ್ಕೆ ಬಂದ ನಗರ ಬೆರಳಚ್ಚು ವಿಭಾಗದ ಅಧಿಕಾರಿಗಳು, ಸಂಪೂರ್ಣ ತಪಾಸಣೆ ನಡೆಸಿ ಬೆರಳಚ್ಚು ಗುರುತು ಪತ್ತೆ ಹಚ್ಚಿದ್ದರು. ಈ ಆಧಾರದ ಮೇಲೆ ಇದೀಗ ಕಳ್ಳನನ್ನು ಬಂಧಿಸಿದ್ದು, ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈತ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ.
ಇನ್ನು ಬಂಧಿತನಿಂದ 19.65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಆರೋಪಿಯ ಬಂಧನದಿಂದ 5 ಮನೆಕಳ್ಳತನ ಹಾಗೂ 2 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ.