ಬೆಂಗಳೂರು: ಬಿಜೆಪಿ ಹತ್ತು ಶಾಸಕರ ಅಮಾನತು ಯಾರ ಒತ್ತಡದಿಂದ ಮಾಡಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು. ಅಧಿವೇಶನ ಮುಕ್ತಾಯದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ನಡೆಸುವುದು ಎಲ್ಲ ನಾಯಕರ ಜವಾಬ್ದಾರಿ. ಅದಕ್ಕಾಗಿ ಎಲ್ಲರ ಸಹಕಾರ ಬೇಕು. ಯಾರೇ ಸದಸ್ಯರು ಪೀಠಕ್ಕೆ ಅಗೌರವದಿಂದ ನಡೆದುಕೊಂಡರೆ ಆ ಪೀಠದ ಸಭಾಧ್ಯಕ್ಷನಾಗಿ ನಾನು ಕ್ರಮ ಕೈಗೊಂಡಿದ್ದೇನೆ ಎಂದರು.
ಇದರಲ್ಲಿ ಪಕ್ಷದ ವಿಚಾರ ಇಲ್ಲ. ನೋಟೀಸ್ ನೀಡದೇ ಇದ್ದರೂ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೆ. ಆದರೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಬಿಜೆಪಿಯವರನ್ನು ಕರೆದು 15 ನಿಮಿಷ ಮಾತನಾಡಿದ್ದೇನೆ. ಆದರೆ ಅವರು ಧರಣಿ ಮುಂದುವರಿಸಿದರು ಎಂದರು.
ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಿತ್ತು. ಅದು ಜನ ಪರವಾದ ಬಿಲ್ ಆಗಿತ್ತು. ಹಾಗಾಗಿ ಪ್ರತಿಭಟನೆಯ ಮಧ್ಯೆ ವಿಧೇಯಕಗಳನ್ನು ತೆಗೆದುಕೊಂಡೆವು. ಆದರೆ, ಉಪಸಭಾಧ್ಯಕ್ಷರ ಮುಖಕ್ಕೆ ಬಿಲ್ ಹರಿದು ಹಾಕಿರುವುದು ಪೀಠಕ್ಕೆ ಮಾಡಿದ ಅಗೌರವವಾಗಿದೆ. ನಮಗೆ ಬೇರೆ ಉಪಾಯ ಇಲ್ಲದೇ ಈ ನಿರ್ಧಾರ ತೆಗದುಕೊಂಡಿದ್ದೇನೆ. ಅತ್ಯಂತ ನೋವಿನಿಂದ ತೆಗೆದುಕೊಂಡ ಕ್ರಮವಾಗಿದೆ. ನಾನು ಕ್ರಮ ಕೈಗೊಳ್ಳದಿದ್ದರೆ ಜನರು ಟೀಕೆ ಮಾಡುತ್ತಿದ್ದರು ಎಂದರು.
ನಾನು ಲಕ್ಷ್ಮಣ ರೇಖೆ ದಾಟಿಲ್ಲ: ಮಹಾಘಟಬಂಧನ ಸಭೆಯ ಭೂಜನಕೂಟಕ್ಕೆ ಹೋದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಅವರು ಔತಣಕೂಟ ಏರ್ಪಡಿಸಿದ್ದರು. ಸಿಎಂ ನಮಗೆ ಆಹ್ವಾನ ನೀಡಿದ್ದರು. ಅಲ್ಲಿ ಯಾರು ಬರುತ್ತಾರೆ ಎಂದು ನಮಗೆ ಗೊತ್ತಿಲ್ಲ. ನಾವು ಊಟ ಮಾಡಿ ಬಂದಿದ್ದೇವೆ. ಅಲ್ಲಿನ ಸಭೆಯಲ್ಲಿ ನಾವೇನು ಪಾಲ್ಗೊಂಡಿಲ್ಲ. ಬೇರೆಯವರು ಕರೆದರೆ ಅದಕ್ಕೂ ನಾನು ಹೋಗುತ್ತೇನೆ. ನಾನು ಯಾವುದೇ ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಸಮರ್ಥಿಸಿಕೊಂಡರು.
ಸ್ಪೀಕರ್ ಯಾವಾಗಲೂ ಪ್ರತಿಪಕ್ಷಗಳ ಮಿತ್ರ. ಹಾಗಿದ್ದರೂ ನನ್ನ ಮೇಲೆ ಸಂಶಯ ಯಾವತ್ತೂ ಕಡಿಮೆ ಆಗುವುದಿಲ್ಲ. ನಾನು ಸಭಾಧ್ಯಕ್ಷರಾದ ಮೇಲೆ ಯಾವುದೇ ಒತ್ತಡದಲ್ಲಿ ಕೆಲಸ ಮಾಡುವ ವ್ಯಕ್ತಿತ್ವದವನಲ್ಲ. ನನಗೆ ಆಗಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ಉಪಸಭಾಧ್ಯಕ್ಷರ ಮೇಲೆ ಈ ತರಹದ ವರ್ತನೆ ಆದ ಕಾರಣ ನಾನು ಏನು ಮಾಡಬೇಕಾಗಿತ್ತು ಎಂದು ನೀವೇ ಹೇಳಿ? ಎಂದು ಪ್ರಶ್ನಿಸಿದರು.
ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿಯಮದ ಪ್ರಕಾರ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದರು. ನಾನು ಯಾವಾಗಲೂ ಓಪನ್ ಮೈಂಡ್. ಸದನ ಎಂದರೆ ಗೌಜು ಗದ್ದಲ ಇರಬೇಕು. ಅಶಿಸ್ತು ಇರಬಾರದು. ಪೀಠಕ್ಕೆ ಅಗೌರವ ಆದರೆ ಕ್ರಮ ಕೈಗೊಳ್ಳುತ್ತೇನೆ. ಪ್ರಥಮ ಅಧಿವೇಶನವೇ 15 ದಿನ ಮಾಡಿದ್ದೇವೆ. ಇದೊಂದು ಶುಭ ಸಂದೇಶವಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಶಾಲಾ ಮಕ್ಕಳು ಇನ್ನು ಹೊರಗೆ ಕಾಯುವಂತಿಲ್ಲ: ಸದನ ವೀಕ್ಷಿಸಲು ಬರುವ ಶಾಲಾ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕಾಯಿಸುವಂತಿಲ್ಲ. ಅವರು ಕಷ್ಟ ಪಡಬಾರದು. ಅದಕ್ಕಾಗಿ ನಮ್ಮ ಕಚೇರಿಯಿಂದ ಇಮೇಲ್ ಮೂಲಕ ಸಂಬಂಧಿತ ಬಿಪಿಒಗಳಿಗೆ ಮಕ್ಕಳು ಬರಬೇಕಾದ ದಿನಾಂಕ, ಸಮಯವನ್ನು ನಿಗದಿ ಪಡಿಸುತ್ತೇವೆ. ಅವರಿಗೆ ಬೇಕಾದ ಪಾಸನ್ನು ಕೊಡಲಾಗುವುದು. ವಿಧಾನಸೌಧದ ಲಾಂಜ್ನಲ್ಲಿ ಒಳಗಡೆ ಮ್ಯಾಟ್ ಹಾಕಿ ಅವರನ್ನು ಕೂರಿಸುವ ವ್ಯವಸ್ಥೆ ಮಾಡುತ್ತೇವೆ. ಅವರು ಹೊರಗೆ ಬಿಸಿಲಿನಲ್ಲಿ ಕಾಯುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ಸದನದ ಪೀಠಕ್ಕೆ ಅಗೌರವ: 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರಗೆ ಅಮಾನತು ಮಾಡಿ ಸ್ಪೀಕರ್ ಆದೇಶ