ಬೆಂಗಳೂರು: ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸಿಎಂ ಪುತ್ರ ವಿಜಯೇಂದ್ರ ಮಸ್ಕಿಗೆ ಪ್ರಯಾಣ ಬೆಳೆಸಿದ್ದಾರೆ. ಚುನಾವಣೆವರೆಗೂ ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಕೆ.ಆರ್. ಪೇಟೆ ಹಾಗೂ ಶಿರಾ ಕ್ಷೇತ್ರದ ಉಪ ಕದನದಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ವಿಜಯೇಂದ್ರಗೆ ಮಸ್ಕಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ ಮನವಿಯಂತೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ಜವಾಬ್ದಾರಿ ನಿರ್ವಹಿಸಲು ಸಜ್ಜಾಗಿರುವ ವಿಜಯೇಂದ್ರ ತನ್ನ ತಂಡದೊಂದಿಗೆ ಇಂದು ಮಸ್ಕಿಯತ್ತ ತೆರಳುತ್ತಿದ್ದಾರೆ.
ಶಾಸಕ ಪ್ರೀತಮ್ ಗೌಡ ಹಾಗೂ ತಮ್ಮೇಶ ಗೌಡರನ್ನು ಒಳಗೊಂಡ ತಂಡ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಿದ್ದು ಇದೀಗ ಅದೇ ತಂಡವನ್ನು ವಿಜಯೇಂದ್ರ ಮಸ್ಕಿಯತ್ತ ಕೊಂಡೊಯ್ಯುತ್ತಿದ್ದಾರೆ. ಚುನಾವಣಾ ರಣತಂತ್ರ, ಪ್ರಚಾರ ತಂತ್ರ, ಮನೆ ಮನೆ ಪ್ರಚಾರ, ಸಮಾವೇಶಗಳನ್ನು ಆಯೋಜಿಸಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಸ್ಕಿ ಚುನಾವಣೆ ಕುರಿತು ಮಾತುಕತೆ ನಡೆಸಿರುವ ವಿಜಯೇಂದ್ರ, ಕ್ಷೇತ್ರದಲ್ಲಿ ಕಮಲ ಅರಳಿಸುವ ಆತ್ಮವಿಶ್ವಾಸದೊಂದಿಗೆ ಸಿಎಂ ಯಡಿಯೂರಪ್ಪ ಆಶೀರ್ವಾದ ಪಡೆದುಕೊಂಡಿದ್ದಾರೆ.
ಉಪ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು ಶತಾಯ ಗತಾಯ ಮಸ್ಕಿಯನ್ನು ವಶಕ್ಕೆ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಈವರೆಗೂ ಕಮಲ ಅರಳದ ಕೆ.ಆರ್. ಪೇಟೆ ಹಾಗೂ ಶಿರಾದಲ್ಲಿ ಕಮಲ ಅರಳಿಸಿರುವ ವಿಜಯೇಂದ್ರ ಈಗ ಮಸ್ಕಿಯ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ.. ಎಲ್ಲಾ ಟೋಲ್ ಬೂತ್ ರದ್ದುಪಡಿಸಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ: ಗಡ್ಕರಿ