ಬೆಂಗಳೂರು : ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ದರದ ಪ್ರತಿ ಡೋಸ್‌ಗೆ ಸೇವಾ ಶುಲ್ಕವನ್ನು 200 ರೂ.ರಂತೆ ಪರಿಷ್ಕರಿಸಿ ನಿಗದಿಪಡಿಸಲಾಗಿದೆ. ಈ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನ ಪಡೆದ ಸಂದರ್ಭದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮಾನುಸಾರ ಕ್ರಮಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಕೋವಿಡ್-19 ಲಸಿಕಾಕರಣಕ್ಕೆ ಚಾಲನೆ ನೀಡಲಾಯಿತು. ಲಸಿಕಾ ತಯಾರಕರು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ದರದ ಜೊತೆಗೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ಸರ್ಕಾರದ ಸುತ್ತೋಲೆಯಲ್ಲಿ ಪ್ರತಿ ಡೋಸ್‌ಗೆ 100 ರೂ. ಮಾತ್ರ ಸೇವಾ ಶುಲ್ಕವಾಗಿ ಪಡೆಯಲು ನಿಗದಿಪಡಿಸಲಾಗಿತ್ತು. ಆದರೆ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್, ಸಂಘವು ಮನವಿಯನ್ನು ಸಲ್ಲಿಸಿ ಇದೀಗ 200 ರೂ. ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಕೋವಿಡ್ ವಾರಿಯರ್ಸ್ಗೆ ಗುಡ್ನ್ಯೂಸ್: ಪ್ರೋತ್ಸಾಹ ಧನ ಆರು ತಿಂಗಳವರೆಗೆ ವಿಸ್ತರಣೆ
ಕೋವಿಡ್-19 ಲಸಿಕಾಕರಣಕ್ಕೆ ಒನ್ ಸೈಟ್ ಲಸಿಕಾಕರಣ ಬೂತ್‌ಗಳನ್ನು ತೆರೆಯಬೇಕೆಂದು, ಲಸಿಕಾಕರಣದ ಸ್ಥಳದಲ್ಲಿ ಸಾಕಷ್ಟು ಅಂತರ ಕಾಪಾಡಲು ಹೆಚ್ಚಿನ ಸ್ಥಳಾವಕಾಶ, ಲಸಿಕೆ ಖರೀದಿಸಲು ಮುಂಚಿತವಾಗಿ ಮೊತ್ತ ಪಾವತಿಸಬೇಕಾಗುತ್ತದೆ. ಹೀಗಾಗಿ ಅನೇಕ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾದ ಕಾರಣ ಈ ಸೇವಾ ಶುಲ್ಕವನ್ನು ಕನಿಷ್ಠ 300 ರೂ.ಗಳಿಗೆ ಹೆಚ್ಚಿಸಲು ಮನವಿ ಮಾಡಿತು.ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರ 200 ರೂ. ನಿಗದಿಪಡಿಸಿದೆ.