ಬೆಂಗಳೂರು: ಹನುಮ ಜನ್ಮಭೂಮಿ ಅಂಜನಾದ್ರಿ ಅಕಾಡೆಮಿ/ಪ್ರಾಧಿಕಾರ ರಚನೆ ಮಾಡಬೇಕು ಹಾಗು ಹನುಮ ಜಯಂತಿಯನ್ನು ಭಜನಾ ದಿನವೆಂದು ಘೋಷಿಸಬೇಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸತ್ಸಂಗ ಭಜನ ಮಹಾಮಂಡಳಿ ಸಭಾ ಮನವಿ ಸಲ್ಲಿಸಿದೆ.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಬೇಲಿ ಮಠದ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಸ್ವಾಮೀಜಿಗಳು, ಹನುಮ ಜಯಂತಿಯನ್ನು ಭಜನಾ ದಿನವನ್ನಾಗಿ ಘೋಷಿಸಬೇಕು, ಹನುಮ ಜನ್ಮ ಭೂಮಿ ಪ್ರಾಧಿಕಾರ ರಚನೆ, ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆಗಳು:
- ಬೆಟ್ಟದ ಮೆಟ್ಟಿಲಿನ ಮೇಲೆ ಎರಡು ಬದಿಯಲ್ಲಿ ಸಾಲುದೀಪಗಳ ವ್ಯವಸ್ಥೆ
- ಧ್ವನಿವರ್ಧಕದಲ್ಲಿ ನಿರಂತರ ಹನುಮಾನ್ ಚಾಲೀಸ್ ಪಠಣ
- ಮೆಟ್ಟಿಲು ಹತ್ತುವಾಗ ಯಾತ್ರಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು
- ಯಾತ್ರಿಗಳು ವಿಶ್ರಮಿಸುವುದಕ್ಕೆ ಕೊಠಡಿಗಳನ್ನು ನಿರ್ಮಿಸುವುದು
- ಬೆಟ್ಟ ಹತ್ತುವ ಮುನ್ನ ಸ್ನಾನಗೃಹ, ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು
- ಬೆಟ್ಟದಲ್ಲಿ ರಕ್ಷಣಾ ಬೇಲಿ ಹಾಕಿಸುವುದು ಮತ್ತು ನಾಮಫಲಕಗಳನ್ನು ಹಾಕುವುದು
- ಭಜರಂಗಿ ಜನ್ಮಭೂಮಿಯ ಪರಿಚಯದ ಫಲಕಗಳನ್ನು ಹಾಕುವುದು
- ಅನಾರೋಗ್ಯಪೀಡಿತರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ರೋಪ್‌ವೇ ವ್ಯವಸ್ಥೆ ಹಾಗೂ ಯಾತ್ರಿಗಳಿಗೆ ತಂಗಲು ಛತ್ರದ ವ್ಯವಸ್ಥೆ
- ಭಕ್ತರಿಗೆ ಅನುಕೂಲವಾಗುವಂತೆ ನ್ಯಾಯ ಬೆಲೆಯಲ್ಲಿ ದೊರಕುವ ಪೂಜಾ ಸಾಮಗ್ರಿಗಳ ಅಂಗಡಿಯ ವ್ಯವಸ್ಥೆ
- ಪೂಜೆಯ ನಂತರ ಪ್ರಸಾದ ವಿತರಣೆಗೆ ಅಗತ್ಯ ಪಾಕಶಾಲೆ ನಿರ್ಮಿಸುವುದು
- ಮೂಲ ಆಂಜನೇಯ ನಾಮಸ್ಮರಣೆ ಮಾಡಲು ಧ್ಯಾನಮಂದಿರ ನಿರ್ಮಾಣ
- ಯಾತ್ರಿಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ ಮತ್ತು ಯಾತ್ರಿಗಳಿಗೆ ಮಾಹಿತಿ ಕೇಂದ್ರ
- ಯಾತ್ರಿಗಳು ಬೆಟ್ಟ ಹತ್ತುವಾಗ ಮಳೆ, ಬಿಸಿಲು ತಡೆಯಲು ಛಾವಣಿ ವ್ಯವಸ್ಥೆ
- ಯಾತ್ರಿಗಳಿಗೆ ಅನುಕೂಲವಾಗುವಂತೆ ಹತ್ತಿರವಿರುವ ತೀರ್ಥಕ್ಷೇತ್ರಗಳ ಮಾಹಿತಿಯ ನಾಮಫಲಕ ಅಳವಡಿಸುವುದು. ಮಾರ್ಗಶಿರ ಶುದ್ಧ ತ್ರಯೋದಶಿಯಂದು ಭಜನಾ ದಿನವೆಂದು ರಾಜ್ಯ ಸರ್ಕಾರ ಘೋಷಿಸಿ ಕಾರ್ಯರೂಪಕ್ಕೆ ತರಬೇಕೆಂದು ಪ್ರಾರ್ಥನೆ ಸಲ್ಲಿಸಬೇಕೆಂಬ ಬೇಡಿಕೆಗಳನ್ನು ಸಲ್ಲಿಸಲಾಗಿದೆ.