ಬೆಂಗಳೂರು: ಗಣೇಶ ಮೂರ್ತಿ ಮಾರಾಟಗಾರರು ತಮಿಳುನಾಡು ಕಾರ್ಮಿಕರನ್ನು ಕರೆಸಿ ಮೂರ್ತಿ ತಯಾರು ಮಾಡಿಸುತ್ತಿದ್ದಾರೆ. ಇನ್ನು ಕೆಲವರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಆರ್ಡರ್ ಮಾಡುತ್ತಾರೆ. ಆದರೆ, ಸದ್ಯ ಆ ಪ್ರದೇಶಗಳಲ್ಲಿ ಪ್ರವಾಹವಾಗಿ ಮೂರ್ತಿಗಳು ಕೊಚ್ಚಿ ಹೋಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಗಣೇಶ ಮೂರ್ತಿ ಮಾರಾಟದ ಮೇಲೂ ಪರಿಣಾಮ ಬೀರಿದೆ. ಗಣೇಶ ಮೂರ್ತಿ ಮಾರುವ ಕೆಲ ಮಾರಾಟಗಾರರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಜೇಡಿಮಣ್ಣಿನ ಮೂರ್ತಿಗಳನ್ನು ಮಾಡಲು ಆರ್ಡರ್ ಕೊಟ್ಟಿದ್ದಾರೆ. ಆದರೆ, ಅದೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕಡೆ ಗಣೇಶನ ಮೂರ್ತಿ ಮಾಡಲು ಲೇಬರ್ ಚಾರ್ಜ್ ಕೊಟ್ಟು, ಇತ್ತ ತುತ್ತು ಬಾಯಿಗೆ ಬರುವುದು ಇರಲಿ ಕೈಗೂ ಸಿಗದೇ ಕಂಗಾಲಾಗಿದ್ದಾರೆ. ಇನ್ನು ಜೇಡಿಮಣ್ಣಿನ ಮೂರ್ತಿಗಳ ಕಥೆ ಇದಾದರೆ, ಪಿಒಪಿ ಗಣೇಶ ಮೂರ್ತಿ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ ಮಾರಾಟಗಾರರು ಉಳಿಕೆಯಾಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ಒಟ್ಟಾರೆ, ಪಿಒಪಿ ಗಣಪ ಬ್ಯಾನ್ ಆಗಿ, ಇತ್ತ ಜೇಡಿಮಣ್ಣಿನ ಗಣೇಶ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇವುಗಳ ಮಧ್ಯೆ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.