ಬೆಂಗಳೂರು: ಶಿಕ್ಷಾ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ಬಿಡುಗಡೆ ಪ್ರಕಿಯೆಯನ್ನು ಜೈಲಾಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ಬಿಡುಗಡೆ ಪತ್ರದೊಂದಿಗೆ ಆಸ್ಪತ್ರೆಗೆ ತಲುಪಿದ ಜೈಲು ಸಿಬ್ಬಂದಿ ನಿಯಮಾವಳಿ ಪೂರ್ಣಗೊಳಿಸಲು ಮುಂದಾಗಿ, ಅಗತ್ಯ ದಾಖಲಾತಿಗಳಿಗೆ ಶಶಿಕಲಾ ಅವರಿಂದ ಜೈಲಾಧಿಕಾರಿಗಳು ಸಹಿ ಹಾಕಿಸಿಕೊಂಡರು.
ಬಿಡುಗಡೆ ನಿಯಮ ಪೂರ್ಣಗೊಳ್ಳುತ್ತಿದ್ದಂತೆ ಪೊಲೀಸ್ ಭದ್ರತೆ ವಾಪಸ್ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಸಾಮಾನ್ಯ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ನಂತರ ಅವರು ನೇರವಾಗಿ ಆಸ್ಪತ್ರೆಯಿಂದಲೇ ತಮ್ಮೂರಿಗೆ ಪಯಣ ಬೆಳಸಲಿದ್ದಾರೆ.
ಸದ್ಯ ಕೋವಿಡ್-19 ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಶಿಕಲಾ ಅವರು, ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಅನುಮತಿ ನೀಡಿದರೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿರುವ ಬೆಂಬಲಿಗರು
ಶಶಿಕಲಾ ಬಿಡುಗಡೆ ವಿಷಯ ಗೊತ್ತಾಗುತ್ತಿದ್ದಂತೆ ತಮಿಳುನಾಡಿನಿಂದ ಬೆಂಬಲಿಗರು ಹಾಗೂ ಅಭಿಮಾನಿಗಳು ವಿಕ್ಟೋರಿಯಾ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಂಭ್ರಮದಿಂದ ಸಿಹಿ ಹಂಚಿಕೊಳ್ಳುತ್ತಿದ್ದಾರೆ.