ಬೆಂಗಳೂರು: ಮೂರು ಕೃಷಿ ಕಾಯ್ದೆ ವಿರೋಧಿಸಿ ನಾಳೆ ರಾಜಭವನ ಚಲೋ ನಡೆಸುತ್ತಿದ್ದೇವೆ. ಪೊಲೀಸರು ನಮಗೆ ಸಹಕಾರ ಕೊಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ನಾಳೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಎಲ್ಲಾ ವಾಹನಗಳು ಫ್ರೀಡಂ ಪಾರ್ಕ್ ಗೆ ಬರಬೇಕು. ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ನಾವು ನಡೆಸುತ್ತಿರುವ ಬೃಹತ್ ಹೋರಾಟ ಇದಾಗಿದೆ. ರಾಜ್ಯದಲ್ಲಿ ಮೂರು ಕರಾಳ ಕಾನೂನು ಹಾಗೂ ಕೊರೊನಾ ಸಂದರ್ಭದಲ್ಲಿ ನೀಡಿದ ಮಾತಿಗೆ ತಪ್ಪಿರುವ ಹಿನ್ನೆಲೆ ಹೋರಾಟ ಮಾಡುತ್ತೇವೆ. ರೈತರ ಹೋರಾಟಕ್ಕೆ ಬೆಂಬಲವಾಗಿ ರಾಜಭವನ ಚಲೋ ನಡೆಸುತ್ತಿದ್ದೇವೆ. ಪೊಲೀಸರ ಜೊತೆ ಮಾತನಾಡುತ್ತಿದ್ದು, ಸಹಕಾರ ಸಿಗುವ ನಿರೀಕ್ಷೆಯಿದೆ ಎಂದರು.
ಮರಾಠ ಸಮಿತಿ ರಚನೆ ಅಗತ್ಯಯಿರಲಿಲ್ಲ
ರಾಜ್ಯದಲ್ಲಿ ಮರಾಠ ಬೋರ್ಡ್ ರಚನೆ ಅಗತ್ಯ ಇರಲಿಲ್ಲ. ಮರಾಠ ಬೋರ್ಡ್ ರಚಿಸುವ ಮೂಲಕ ಬಿಜೆಪಿಯು ಆ ಭಾಗದಲ್ಲಿ ಗೊಂದಲ ಸೃಷ್ಟಿಸಿದೆ. ಜಾತಿ, ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದರು.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ವಿಚಾರ ಕುರಿತು ಮಾತನಾಡಿ, ಮಹಾರಾಷ್ಟ್ರ ಸಿಎಂ ಮಾತಾಡಿರುವುದನ್ನು ನಾನು ಖಂಡಿಸುತ್ತೇನೆ. ರಾಜ್ಯ ರಚನೆಯಾದಾಗಲೇ ಗಡಿ ನಿರ್ಧಾರವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇಲ್ಲಿರುವ ಮರಾಠಿಗರು ನಮ್ಮವರು, ಅವರೆಲ್ಲ ಕನ್ನಡಿಗರು. ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿದ್ದೇ ಇದೆಲ್ಲದಕ್ಕೂ ಕಾರಣ. ಮರಾಠಿ ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಡಿನೋಟಿಫಿಕೇಶನ್ ಕೇಸ್ ಬಗ್ಗೆ ನನಗೂ ಸಾಕಷ್ಟು ಅನುಭವ ಇದೆ. ಮುಖ್ಯಮಂತ್ರಿಗಳ ಯಾವ ಕೇಸ್ಗೆ ಬಿ ರಿಪೋರ್ಟ್ ಹಾಕಿದ್ದಾರೆ. ಅನ್ನೋದನ್ನ ನೋಡಿ ಪ್ರತಿಕ್ರಿಯೆ ಕೊಡುತ್ತೇನೆ ಎಂದರು.