ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಹಾಕುವ ದಂಡ ಇನ್ಮೇಲೆ 200 ರೂಪಾಯಿಯಿಂದ 2000 ರೂಪಾಯಿ ಆಗಬಹುದು ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ಜಿ.ಎ.ಶ್ರೀನಿವಾಸ್ ತಿಳಿಸಿದ್ದಾರೆ.
ಹೌದು, ತಂಬಾಕು ಮಾರಾಟ ಮತ್ತು ಬಳಕೆ ನಿಯಮ ಉಲ್ಲಂಘಿಸುವವರಿಗೆ ಕೇವಲ 200 ರೂಪಾಯಿ ದಂಡ ವಿಧಿಸುತ್ತಿರುವುದು ಪರಿಣಾಮಕಾರಿಯಲ್ಲದ ಕಾರಣ ದಂಡದ ಮೊತ್ತವನ್ನು 2000 ರೂಪಾಯಿಗೆ ಏರಿಸುವ ಪ್ರಸ್ತಾವನೆ ಲೋಕಸಭೆಯಲ್ಲಿ ಮಂಡನೆಯಾಗಬೇಕಿದೆ ಎಂದು ಬೆಂಗಳೂರು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ಜಿ.ಎ.ಶ್ರೀನಿವಾಸ್ ತಿಳಿಸಿದ್ದಾರೆ.
ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ವಿಶ್ವ ತಂಬಾಕು ದಿನ ಅಂಗವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಮೇ 31 ರಂದು ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನದಂದು ತಂಬಾಕು ಸೇವನೆಯಿಂದ ಆಗುವ ಅಪಾಯ ಕುರಿತು ಜನರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ವಿಶ್ವ ತಂಬಾಕು ನಿಷೇಧ ದಿನವನ್ನು ರೋಸ್ ಡೇ ಹೆಸರಿನಲ್ಲಿ ಆಚರಿಸಲಿದ್ದು, ಅಂದು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಗುಲಾಬಿ ಹೂವು ನೀಡಲಾಗುವುದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಮೇ 31ರಂದು ವಿಶ್ವ ತಂಬಾಕು ದಿನ ಅಂಗವಾಗಿ 'ತಂಬಾಕು ನಿಮ್ಮ ಉಸಿರಾಟವನ್ನು ಕೊಲ್ಲಲು ಬಿಡದಿರಿ' ಎಂಬ ಘೋಷವಾಕ್ಯದ ಮೂಲಕ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದರು. ಇನ್ನು ಕಾರ್ಯಾಗಾರದಲ್ಲಿ ಉಪ ನಿರ್ದೇಶಕ ಜಿ.ಮುರಳೀಧರ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.