ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಸಿಎಂ ಕುಮಾರಸ್ವಾಮಿ ಇದೀಗ ಬೆಂಗಳೂರಿಗೆ ಮರಳಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಚಿವ ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್, ಶಾಸಕ ಕೋನರೆಡ್ಡಿ, ಶರವಣ ಬರಮಾಡಿಕೊಂಡರು. ಅಲ್ಲಿಂದ ನೇರವಾಗಿ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆಯುತ್ತಿರುವ ಜೆಡಿಎಸ್ ಸಭೆಗೆ ತೆರಳಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸಚಿವ ಜಿ.ಟಿ.ದೇವೇಗೌಡ ಕೂಡಾ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ದೇವೇಗೌಡರು, ಸಿಎಂ ಕುಮಾರಸ್ವಾಮಿ ಜತೆ ಚರ್ಚೆ ನಡೆಸಿ ಒಂದು ನಿರ್ಧಾರ ಕೈಗೊಳ್ಳಲಿದ್ದೇವೆ. ಶಾಸಕಾಂಗ ಸಭೆ ಬೇರೆ ಕಡೆ ನಡೆಯಲಿದೆ ಎಂದು ತಿಳಿಸಿದರು.
ದೇವೇಗೌಡರ ಜತೆ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಿದ್ದು, ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತರ ಚಟುವಟಿಕೆ, ಸರ್ಕಾರ ಉಳಿಸಿಕೊಳ್ಳುವ ಕಾರ್ಯತಂತ್ರ, ಕಾಂಗ್ರೆಸ್ ನಡೆ, ನಾಯಕತ್ವ ಬದಲಾವಣೆ ಮುಂತಾದವುಗಳ ಬಗ್ಗೆ ದೊಡ್ಡಗೌಡರು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.