ಬೆಂಗಳೂರು: ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹತೆ ಇಲ್ಲದವರನ್ನು ಸೇರ್ಪಡೆ ಮಾಡಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೂಚಿಸಿದ್ದಾರೆ.
ನೋಟಿಸ್ ನೀಡಲಾಗಿರುವ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಅವರ ಅಧೀನ ಸಿಬ್ಬಂದಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕಠಿಣ ದಂಡನೆ ವಿಧಿಸುವ ಕುರಿತು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ 10 ದಿನಗಳ ಒಳಗೆ ತಮ್ಮ ಕಚೇರಿಗೆ ವರದಿ ಸಲ್ಲಿಸಬೇಕೆಂದು ಅವರು ನಿರ್ದೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು, ಬಿಬಿಎಂಪಿಯ ಉತ್ತರ, ದಕ್ಷಿಣ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅರ್ಹತೆ ಇಲ್ಲದವರನ್ನು ಸೇರ್ಪಡೆಗೊಳಿಸಿದ್ದನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ. ಜನವರಿ 16 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ಅನುಸರಿಸದೆ ಅರ್ಹತೆ ಇಲ್ಲದ ಮತದಾರರನ್ನು ನೋಂದಾಯಿಸಲಾಗಿದೆ ಎಂಬ ಆರೋಪವಿದೆ.
ಹಾಗಾಗಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿ ಈಶ್ವರ ಪ್ರಸನ್ನಯ್ಯ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿ ಬಾಲಚಂದ್ರ, ಹೆಬ್ಬಾಳ ಕ್ಷೇತ್ರದ ಕಂದಾಯ ಅಧಿಕಾರಿ ನಾಗರತ್ನಮ್ಮ, ನೆಲಮಂಗಲ ತಾಲೂಕು ತಹಶೀಲ್ದಾರ್ ಎಂ. ಶ್ರೀನಿವಾಸಯ್ಯ, ದೊಡ್ಡಬಳ್ಳಾಪುರ ತಾಲೂಕು ತಹಶೀಲ್ದಾರ್ ಶಿವರಾಜು, ರಾಮನಗರ ತಾಲೂಕು ತಹಶೀಲ್ದಾರ್ ಟಿ.ಎನ್. ನರಸಿಂಹಮೂರ್ತಿ, ಕನಕಪುರ ತಾಲೂಕು ತಹಶೀಲ್ದಾರ್ ಆನಂದಯ್ಯ, ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್, ಅವರಿಗೆ ನಿರಂತರವಾಗಿ ಪರಿಷ್ಕರಣೆಯಲ್ಲಿ ಸರಿಪಡಿಸಿಕೊಂಡು. ಇನ್ಮುಂದೆ ಲೋಪಗಳು ಪುನರಾವರ್ತನೆಯಾಗದಂತೆ ವೈಯಕ್ತಿಕ ಗಮನಹರಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ನೋಟಿಸ್ ನೀಡಲಾಗಿರುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.