ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ವಿಧಾನಸಭಾ ಚುನಾವಣೆಯ ಮತ ಕೇಂದ್ರಗಳಲ್ಲಿ ಮತ ಚಲಾಯಿಸಿದ ಮತದಾರರಿಗೆ ಉಚಿತ ಆಹಾರ ಪದಾರ್ಥ ಒದಗಿಸಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ಕೃಷ್ಣರಾಜ ಎಸ್.ಪಿ ಅವರ ಮಾಲೀಕತ್ವದ ನಿಸರ್ಗ ಗ್ರ್ಯಾಂಡ್ ಹೋಟೆಲ್‌ಗೆ ನೀಡಲಾಗಿದ್ದ ಅನುಮತಿ ಹಿಂಪಡೆದ ಬಿಬಿಎಂಪಿ ಸಹಾಯಕ ಆಯುಕ್ತರ (ಚುನಾವಣೆ) ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಬಿಬಿಎಂಪಿ ಸಹಾಯಕ ಆಯುಕ್ತರ ಕ್ರಮ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲೀಕ ಎಸ್ ಪಿ ಕೃಷ್ಣರಾಜ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ವಿಶೇಷ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಈ ಹೋಟೆಲ್‌ಗಳು ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳಿಂದ ಯಾವುದೇ ದೇಣಿಗೆ ಪಡೆದುಕೊಳ್ಳವುದಕ್ಕೆ ಅವಕಾಶವಿಲ್ಲ. ಒಂದು ವೇಳೆ ಈ ರೀತಿಯ ಬೆಳವಣಿಗೆ ಕಂಡು ಬಂದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಈ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾದಲ್ಲಿ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯವಾಗಿರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸತೀಶ್ ಭಟ್ ವಾದ ಮಂಡಿಸಿ, 2014, 2018ರ ರಾಜ್ಯ ವಿಧಾನಸಭೆ ಮತ್ತು 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಮತ ಚಲಾಯಿಸಿದ ಮತದಾರರಿಗೆ ಅರ್ಜಿದಾರರು ಉಚಿತವಾಗಿ ಆಹಾರ ಪದಾರ್ಥ ಪೂರೈಸಿದ್ದರು.
ಇದು ಕೇವಲ ಮತದಾರರನ್ನು ಮತ ಚಲಾಯಿಸಲು ಉತ್ತೇಜಿಸುವ ಕ್ರಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮತದಾನ ಬಂದು ಶಾಹಿ ತೋರಿಸಿದವರಿಗೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಬೆಣ್ಣೆ ಖಾಲಿ ದೊಸೆ, ಸಿಹಿ ತಿಂಡಿ ಮತ್ತು ಪಾನಕವನ್ನು ಉಚಿತವಾಗಿ ನೀಡಲಾಗುತ್ತದೆ.
ಆಹಾರ ಪೂರೈಸಿದರೆ ನೀತಿ ಸಂಹಿತೆಯ ಉಲ್ಲಂಘನೆ: ಆದರೆ, ಆಹಾರ ಪದಾರ್ಥ ಪೂರೈಸಲು ಬಿಬಿಎಂಪಿ ಅರ್ಜಿದಾರರಿಗೆ ಏ. 15 ರಂದು ಅನುಮತಿ ನೀಡಿತ್ತು. ಆದರೆ, ಮಂಗಳವಾರ (ಮೇ 9 ರಂದು) ಸಂಜೆ ನಾಲ್ಕು ಗಂಟೆಗೆ ದಿಢೀರ್ ಆಗಿ ನೀತಿ ಸಂಹಿತೆ ಜಾರಿ ಹೆಸರಿನಲ್ಲಿ ಏ. 15ರಂದು ನೀಡಲಾಗಿದ್ದ ಅನುಮತಿ ಹಿಂಪಡೆದಿರುವುದಾಗಿ ಬಿಬಿಎಂಪಿ ಸಹಾಯಕರ ಆಯುಕ್ತರು ಪತ್ರಿಕಾ ಪ್ರಕಟಣೆ ಎಂದು ತಿಳಿಸಿದರು. ಅಲ್ಲದೆ, ಮತದಾನದ ಮುನ್ನವೇ ಮತದಾರರಿಗೆ ಆಹಾರ ಪೂರೈಸಿದರೆ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಮತ್ತು ಮತದಾರರಿಗೆ ಆಮಿಷ ಒಡ್ಡಿದಂತಾಗಲಿದೆ.
ಆದರೆ, ಮತದಾನ ಮಾಡಿ ಬಂದು ಚುನಾವಣಾಧಿಕಾರಿಗಳು ಬೆರಳಿಗೆ ಹಾಕಿದ ಶಾಹಿ ಹಾಗೂ ಗುರುತಿನ ಚೀಟಿ ತೋರಿಸಿದ ಮತದಾರರಿಗೆ ಆಹಾರ ಪದಾರ್ಥವನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ಅರ್ಜಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಹಯೋಗ ಹೊಂದಿಲ್ಲ. ಆದ್ದರಿಂದ ಸಹಾಯಕ ಆಯುಕ್ತರ ಕ್ರಮ ರದ್ದುಪಡಿಸಬೇಕು. ಅರ್ಜಿಯ ವಿಲೇವಾರಿ ಮಾಡುವರೆಗೂ ಆಯುಕ್ತರು ನೀಡಿರುವ ಪತ್ರಿಕಾ ಪ್ರಕಟಣೆಗೆ ತಡೆ ನೀಡಬೇಕು. ಮತದಾನದ ನಂತರ ಮತದಾರರಿಗೆ ಉತ್ತೇಜನ ಕ್ರಮವಾಗಿ ಆಹಾರ ಪೂರೈಸಲು ಅರ್ಜಿದಾರರಿಗೆ ಅನುಮತಿ ನೀಡುವಂತೆ ಬಿಬಿಎಂಪಿ ಸಹಾಯಕ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ: ಚುನಾವಣೆಯ ಹಿನ್ನೆಲೆ ಮೇ 10ರಂದು ಮತದಾರರು ಮತ ಚಲಾಯಿಸಿ ಬಂದು ಗುರುತಿನ ಚೀಟಿ ಅಥವಾ ಶಾಹಿ ಹಾಕಿದ ಬೆರಳು ತೋರಿಸಿದರೆ ಉಚಿತ ಅಥವಾ ರಿಯಾಯಿತಿ ದರಲ್ಲಿ ತಿಂಡಿ ಮತ್ತು ಊಟ, ಪಾನೀಯ ಪೂರೈಸಲಾಗುವುದು ಎಂದು ತಿಳಿಸಿ ಬೋರ್ಡ್ ಅಳವಡಿಸಲಾಗಿದೆ. ಈ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಪ್ರಕಟಣೆ ಹೊರಡಿಸಿದ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ ಸಹಾಯಕ ಆಯುಕ್ತರು ಮೇ 9ರಂದು ಸಂಜೆ ಪತ್ರಿಕಾ ಪ್ರಕಟಣೆ ನೀಡಿದ್ದರು.
ಇದನ್ನೂ ಓದಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯ: ಹೈಕೋರ್ಟ್