ಬೆಂಗಳೂರು : ಕರ್ನಾಟಕ ಹೋಮಿಯೊಪತಿ ಪದ್ಧತಿ ಔಷಧ ಮಂಡಳಿಯ ಚುನಾವಣೆಯಲ್ಲಿ ಭೌತಿಕ ಮತದಾನ ವ್ಯವಸ್ಥೆ ಕಲ್ಪಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಡಾ. ಪ್ರಕಾಶ್ ಮಂಟಿಕೊಪ್ಪ ಸೇರಿ ಮೂವರು ಹೋಮಿಯೊಪತಿ ವೈದ್ಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಎಸ್ ಸಿ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರ ಪರ ವಕೀಲ ದೇವಿಪ್ರಸಾದ್ ಶೆಟ್ಟಿ ವಾದ ಮಂಡಿಸಿ, ಕರ್ನಾಟಕ ಹೋಮಿಯೊಪತಿ ವೈದ್ಯರ ಕಾಯ್ದೆ-1961ರ ಸೆಕ್ಷನ್ 11 ಮತ್ತು 12ರ ಪ್ರಕಾರ ಕರ್ನಾಟಕ ಹೋಮಿಯೋಪತಿ ಪದ್ಧತಿ ಔಷಧ ಮಂಡಳಿಯ ಚುನಾವಣೆಯಲ್ಲಿ ಕೇವಲ ಅಂಚೆ ಮತಪತ್ರ ಮೂಲಕ ಮತದಾನಕ್ಕೆ ಅವಕಾಶವಿದೆ.
ಈ ಪದ್ಧತಿಯಲ್ಲಿ ಅಕ್ರಮ ನಡೆಯುವ ಸಾಧ್ಯತೆಯಿದೆ. ಭೌತಿಕ ಮತದಾನ ಪ್ರಕ್ರಿಯೆಗೆ ಅವಕಾಶವಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಭೌತಿಕ ಮತದಾನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮತ್ತು ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರರು ಹೋಮಿಯೊಪತಿ ವೈದ್ಯರಾಗಿದ್ದಾರೆ. ಕರ್ನಾಟಕ ಹೋಮಿಯೊಪತಿ ಪದ್ಧತಿ ಔಷಧ ಮಂಡಳಿಯ ಮತದಾರರಾಗಿದ್ದಾರೆ. ಮಂಡಳಿ ಚುನಾವಣೆ ಬಗೆಗಿನ ಕುಂದುಕೊರತೆ ಪ್ರಶ್ನಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು. ಜತೆಗೆ, ಇದನ್ನು ತಕರಾರು ಅರ್ಜಿಯಾಗಿ ಮಾರ್ಪಡಿಸಿ, ಏಕ ಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು.