ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಡಿ.19ರಂದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದಡಿ ಬಂಧಿತರಾಗಿದ್ದ ಐವತ್ತಕ್ಕೂ ಹೆಚ್ಚು ಜನರಲ್ಲಿ ಈಗಾಗಲೇ 21 ಮಂದಿಗೆ ಕಳೆದ ಫೆ.17 ರಂದು ಜಾಮೀನು ನೀಡಿದ್ದ ಹೈಕೋರ್ಟ್, ಗುರುವಾರ ಮತ್ತೆ 16 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಜಾಮೀನು ಕೋರಿ ಮೊಹಮ್ಮದ್ ಸುಹೇಲ್ ಸೇರಿದಂತೆ 16 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಲತೀಫ್, ತನಿಖಾಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ನಿರ್ದಿಷ್ಟ ಸಾಕ್ಷ್ಯವಿಲ್ಲ ಎಂದು ಘಟನೆ ಕುರಿತು ವಿವರಿಸಿದರು. ವಾದ ಮಾನ್ಯ ಮಾಡಿದ ಪೀಠ, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳು ತಲಾ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್, ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ, ಅಗತ್ಯವಿದ್ದಾಗ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಿ, ಸಾಕ್ಷಿ ನಾಶಪಡಿಸಬಾರದು, ಇದೇ ಮಾದರಿಯ ಅಪರಾಧಗಳಲ್ಲಿ ಮತ್ತೆ ಭಾಗಿಯಾಗಬಾರದು. ಪೂರ್ವಾನಮತಿ ಇಲ್ಲದೇ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಪೊಲೀಸರ ಆರೋಪವೇನು?
ಆರೋಪಿಗಳು 2019ರ ಡಿ.19ರಂದು ಸಿಎಎ ವಿರೋಧಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಎದುರಿನ ಜಂಕ್ಷನ್ ಬಳಿ ಅಕ್ರಮ ಕೂಟ ಸೇರಿದ್ದರು. ಠಾಣೆಗೆ ಬೆಂಕಿ ಹಚ್ಚಿ ಪೊಲೀಸರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಜಲ್ಲಿ ಕಲ್ಲು, ಸೋಡಾ ಬಾಟಲ್ ಹಾಗೂ ಗ್ಲಾಸ್‌ಗಳನ್ನು ಎಸೆದು ಠಾಣೆಯ ಹೆಂಚುಗಳನ್ನು ಜಖಂಗೊಳಿಸಿದ್ದರು. ವಾಹನಗಳನ್ನು ಪುಡಿ ಮಾಡಿದ್ದಲ್ಲದೆ, ಬೆಂಕಿ ಹಚ್ಚಿದ ಟಯರ್‌ಗಳನ್ನು ಠಾಣೆಯೊಳಗೆ ಹಾಕಲು ಪ್ರಯತ್ನಿಸಿದ್ದರು ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.