ಬೆಂಗಳೂರು:ಎಸ್ಟಿ ಸಮುದಾಯದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಯುವಕನನ್ನು ಹೈಕೋರ್ಟ್ ಖುಲಾಸೆಗೊಳಿಸಿ ಇಂದು ತೀರ್ಪು ಪ್ರಕಟಿಸಿದೆ.
ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸಲು ಕೋರಿ ದಾವಣಗೆರೆಯ ಮಹಾಂತೇಶ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನರೇಂದರ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಿಂದಾಗಿ ಕಳೆದ 7 ವರ್ಷಗಳಿಂದ ಜೈಲಿನಲ್ಲಿದ್ದ ಮಹಾಂತೇಶ ದೋಷಮುಕ್ತರಾಗಿದ್ದಾನೆ.
2013ರಲ್ಲಿ ದಾವಣಗೆರೆಯ ಕಾಲೇಜೊಂದರಿಂದ ಮಹಾಂತೇಶ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆಯ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಅಪಹರಣ, ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ 7 ವರ್ಷ ಜೈಲು ವಿಧಿಸಿತ್ತು. ಹಾಗೆಯೇ, ಎಸ್ಟಿ ಸಮುದಾಯಕ್ಕೆ ಸೇರಿದ ಅಪ್ರಾಪ್ತೆ ಅಪಹರಿಸಿದ ಆರೋಪದಡಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ವಿಧಿಸಿ 2015ರ ಸೆ.2ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಹಾಂತೇಶ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಎಸ್ಟಿ ಸಮುದಾಯಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ಅಪ್ರಾಪ್ತೆಯನ್ನು ಆರೋಪಿ ಅಪಹರಿಸಿದ್ದಾನೆ ಎಂಬ ಆಧಾರದಲ್ಲಿ ವಾದಿಸಲಾಗದು. ಎಲ್ಲಿಯೂ ಈ ಕುರಿತಂತೆ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದಿದ್ದರು. ಸರ್ಕಾರಿ ವಕೀಲರ ನ್ಯಾಯಸಮ್ಮತ ವಾದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೀಠ, ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ರದ್ದುಪಡಿಸಿ ಆದೇಶಿಸಿದೆ.
ಇದೇ ವೇಳೆ ಅಪ್ರಾಪ್ತೆಯನ್ನು ಬಲವಂತವಾಗಿ ಅಪಹರಿಸಿರುವ ಕುರಿತು ಎಲ್ಲಿಯೂ ಸಾಕ್ಷ್ಯಗಳಿಲ್ಲ. ಆರೋಪಿತ ವ್ಯಕ್ತಿಯೊಂದಿಗೆ 20 ದಿನಗಳ ಕಾಲ ಇದ್ದಾಗಲೂ ಆತನ ವಿರುದ್ಧ ಹೇಳಿಕೆ ನೀಡಿಲ್ಲ. ಆಕೆ ನೀಡಿರುವ ಹೇಳಿಕೆಗಳಲ್ಲಿ ತಾರ್ಕಿಕತೆ ಇಲ್ಲ. ಹಾಗೆಯೇ, ಪ್ರಾಸಿಕ್ಯೂಷನ್ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿತ ಮಹಾಂತೇಶನನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದೆ.