ಬೆಂಗಳೂರು: ಸೀರೆ, ಪಂಚೆ ನೇಯುವುದು ಒಂದು ಕಲೆ ಹಾಗೂ ಕುಶಲತೆ.. ಶತಮಾನಗಳಿಂದ ಯಾವುದೇ ತಂತ್ರಜ್ಞಾನದ ಬದಲಾವಣೆ ಕಾಣದ ಕೈಮಗ್ಗ ಉದ್ಯಮ ಕಳೆದೆರಡು ದಶಕದಿಂದ ವಿದ್ಯುತ್ ಚಾಲಿತ ಕೈಮಗ್ಗ ಯಂತ್ರವಾಗಿ ಪರಿವರ್ತಿತವಾಗಿದೆ. ಆದರೆ, ಬಹುತೇಕ ಗುಡಿ ಕೈಗಾರಿಕೆ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವಲಯ, ಇದೀಗ ಸಂಕಷ್ಟಕ್ಕೀಡಾಗಿದೆ.
ನೇಕಾರರು ಬಹುತೇಕ ಅನಕ್ಷರಸ್ಥರು. ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೈಮಗ್ಗ ಪ್ರೋತ್ಸಾಹ ಯೋಜನೆಗಳ ಮಾಹಿತಿ ಇಲ್ಲವಾಗಿದೆ. ಅದರ ಜೊತೆಗೆ ಉತ್ಪನ್ನಗಳಿಗೆ ಬೇಡಿಕೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೇವಲ ಹಣಕಾಸು ಕೊಡುವ ಸಮಾಧಾನ ಮಾಡುತ್ತೆ. ಆದರೆ, ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಕೆಲಸಗಾರರಿಗೆ ಕೌಶಾಲಾಭಿವೃದ್ಧಿ ಯೋಜನಗಳು ಈವರೆಗೂ ಘೋಷಣೆಯಾಗಿಲ್ಲ ಎಂಬುದು ನೇಕಾರರ ಬೇಸರ.
ಕೈಮಗ್ಗ ಅಭಿವೃದ್ಧಿಗೆ ಕೆಲ ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿವೆ. ಸರ್ಕಾರದ ಪಾತ್ರವಿಲ್ಲದೆ ಪರಿಣಾಮ ಆಗುತ್ತಿಲ್ಲ. ಕಾಲಕ್ಕೆ ತಕ್ಕಂತೆ ಯಾವುದೇ ಅಧ್ಯಯನಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ಕೊರೊನಾದಿಂದಾದ ಸಂಕಷ್ಟಕ್ಕೆ ಯಾವುದೇ ಸಭೆ-ಸಮಾರಂಭಗಳು ಅದ್ದೂರಿಯಾಗಿ ಆಚರಣೆಗೆ ಅಡ್ಡಿಯಾದ ಹಿನ್ನೆಲೆ ಹೊಸ ಸೀರೆ, ಪಂಚೆಗಳ ಬೇಡಿಕೆ ನೆಲ ಕಚ್ಚಿದೆ. 200 ಯೂನಿಟ್ ವಿದ್ಯುತ್ ರಿಯಾಯಿತಿ ಹೊರತುಪಡಿಸಿ, ಬೇರೆ ಯಾವ ನೇರ ಉತ್ತೇಜನಾ ಯೋಜನೆ ನೇಕಾರರ ಕೈ ಸೇರುತ್ತಿಲ್ಲ.
ನೇಕಾರರು ಎಂದು ಸರ್ಕಾರ ಗುರುತಿಸಿ ಚೀಟಿ ನೀಡಬೇಕು ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈಮಗ್ಗ ಉತ್ಪನ್ನಗಳ ಬಳಕೆ ಕಡ್ಡಾಯ ಮಾಡಬೇಕು. ವಿಮೆ ಸೇರಿ ಪಿಂಚಣಿ ನೀಡಬೇಕು ಎಂದು ನೇಕಾರ ಒತ್ತಾಯವಾಗಿದೆ.