ಬೆಂಗಳೂರು : ನ್ಯಾಯಾಲಯದ ವಿಚಾರಣೆ ವೇಳೆ ಕೂಲ್ ಡ್ರಿಂಕ್ಸ್ ಸೇವಿಸಿದ ಪೊಲೀಸ್ ಅಧಿಕಾರಿಗೆ, ಗುಜರಾತ್ ಹೈಕೋರ್ಟ್ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ವಕೀಲರಿಗೆ (ಬಾರ್ ಅಸೋಸಿಯೇಷನ್) 100 ಕ್ಯಾನ್ ಕೂಲ್ ಡ್ರಿಂಕ್ಸ್ ಹಂಚುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆದೇಶಿಸಿದ್ದಾರೆ.
ಅರವಿಂದ್ ಕುಮಾರ್ ಕನ್ನಡಿಗ ನ್ಯಾಯಮೂರ್ತಿಯಾಗಿದ್ದಾರೆ. ಟ್ರಾಫಿಕ್ ಜಂಕ್ಷನ್ನಲ್ಲಿ ಇಬ್ಬರು ಮಹಿಳೆಯರಿಗೆ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ರಾಥೋಡ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ವೇಳೆ, ಈ ಅಧಿಕಾರಿ ತಂಪು ಪಾನೀಯ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸಿಜೆ ಅರವಿಂದ್ ಕುಮಾರ್, ಕೋರ್ಟ್ ವಿಚಾರಣೆ ವೇಳೆ ಇಂತಹ ನಡವಳಿಕೆ ಅಶಿಸ್ತು ಎನ್ನಿಸಿಕೊಳ್ಳುತ್ತದೆ. ಅದರಲ್ಲೂ ವಿಚಾರಣೆಯಲ್ಲಿ ಭಾಗಿಯಾಗಲು ಬಂದು ಹೀಗೆ ನಡೆದಕೊಳ್ಳುವುದು ತಪ್ಪು ಎಂದು ತಿಳಿ ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ ಪ್ರಕರಣದ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿಕೆ
ಅಲ್ಲದೇ, ಅಧಿಕಾರಿಯ ತಪ್ಪಿಗೆ ಶಿಕ್ಷೆಯಾಗಿ ಬಾರ್ ಅಸೋಸಿಯೇಷನ್ ವಕೀಲರಿಗೆ 100 ಕ್ಯಾನ್ ಕೂಲ್ ಡ್ರಿಂಕ್ಸ್ ಹಂಚುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ, ನ್ಯಾಯಾಲಯದಲ್ಲಿ ಅಶಿಸ್ತು ಪ್ರದರ್ಶಿಸಿದ್ದಕ್ಕಾಗಿ ಶಿಸ್ತುಕ್ರಮ ಜರುಗಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ವಕೀಲರೊಬ್ಬರು ಸಮೋಸಾ ತಿನ್ನುವ ಮೂಲಕ ಅಶಿಸ್ತು ಪ್ರದರ್ಶನ ಮಾಡಿದ್ದ ಪ್ರಕರಣವನ್ನು ಪ್ರಸ್ತಾಪಿದ ನ್ಯಾಯಮೂರ್ತಿಗಳು, ತಾವು ಅವರಿಗೂ ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಿದರು. ಹಿಂದೆ ಅರ್ಜಿಯೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸಾ ತಿಂದಿದ್ದರು.
ಆಗ ಅವರಿಗೆ ನಾನು, ನೀವು ಸಮೋಸಾ ತಿನ್ನುವುದಕ್ಕೆ ನಮ್ಮಿಂದ ಏನೂ ಅಡ್ಡಿಯಿಲ್ಲ. ಆದರೆ, ನಮ್ಮೆದುರಿಗೆ ನೀವು ತಿನ್ನುವಂತಿಲ್ಲ. ಒಂದೋ ಎಲ್ಲರಿಗೂ ಕೊಟ್ಟು ತಿನ್ನಬೇಕು ಇಲ್ಲವೇ ನೀವೂ ತಿನ್ನಬಾರದು ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.