ಬೆಂಗಳೂರು: ನಗರದಲ್ಲಿ ಜೆ.ಪಿ. ನಗರದ 7ನೇ ಹಂತದಲ್ಲಿ ಮತ್ತೊಂದು ಕಟ್ಟಡ ಧರಾಶಾಹಿಯಾಗಿದೆ. ಈ ಘಟನೆ ಕಳೆದ ಒಂದು ಗಂಟೆ ಹಿಂದೆ ನಡೆದಿದೆ.
ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿದು ಬಿದ್ದಿದೆ. ಕಟ್ಟಡದ ಮೊದಲ ಎರಡು ಅಂತಸ್ತಿನಲ್ಲಿ ಮನೆಗಳಿದ್ದರೆ, ಕೆಳ ಮಹಡಿಯಲ್ಲಿ ಅಂಗಡಿಗಳಿದ್ದವು. ಕಟ್ಟಡ ಬೀಳುತ್ತಿದ್ದಂತೆಯೇ ಜನರು ಅಂಗಡಿಯಿಂದ ಹೊರ ಓಡಿ ಬಂದಿದ್ದಾರೆ.
ಈ ಕಟ್ಟಡವನ್ನು 30 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು. ಮಣ್ಣಿನಿಂದ ಮೊದಲೆರಡು ಮಹಡಿ ನಿರ್ಮಾಣ ಮಾಡಲಾಗಿದೆ. ಮಳೆ ನೀರಿಗೆ ಮೊದಲೆರಡು ಮಹಡಿ ಸಂಪೂರ್ಣವಾಗಿ ಶಿಥಿಲವಾಗಿದ್ದವು. ಏಳೆಂಟು ವರ್ಷದಿಂದಲೇ ಕಟ್ಟಡ ಬೀಳುವ ಹಂತದಲ್ಲಿದ್ರೂ ಒಂದು ವರ್ಷದ ಹಿಂದೆ ಮೂರನೇ ಮಹಡಿಯನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡಲೇ 2 ಅಗ್ನಿಶಾಮಕ ವಾಹನ, 30ಕ್ಕೂ ಹೆಚ್ಚು ಸಿಬ್ಬಂದಿ, ಐದು ಜನ ಅಧಿಕಾರಿಗಳು ಬಂದಿದ್ದಾರೆ. ಇನ್ನು ಬಿಬಿಎಂಪಿಯಿಂದ ಕಟ್ಟಡ ತೆರೆವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.