ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿರುವುದಕ್ಕೆ ಸರ್ಕಾರದ ವಿರುದ್ಧವೇ ಬಿಜೆಪಿ ವಲಯದಲ್ಲಿ ಅಸಮಾಧಾನ ಎದ್ದಿದೆ. ನಮ್ಮದೇ ಸರ್ಕಾರ ಇದ್ದರೂ ನಮ್ಮ ಸಂಘಟನೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದರೆ ಹೇಗೆ? ಎಂದು ಪಕ್ಷದ ವಲಯದಲ್ಲಿ ಪ್ರಶ್ನೆ ಮೂಡಿದೆ. ಪದಾಧಿಕಾರಿಗಳ ಸಭೆಯಲ್ಲಿಯೂ ಇದೇ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿದ್ದು, ಕಠಿಣ ಕ್ರಮದ ಜೊತೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗಿದೆ.
ಆರ್ಎಸ್ಎಸ್ನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿರುವ ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲೇ ಬಜರಂಗದಳ ಕಾರ್ಯಕರ್ತನ ಹತ್ಯೆ ನಡೆದಿರುವುದಕ್ಕೆ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದೆ. ಗೃಹ ಇಲಾಖೆ, ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದೆ.
ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿಯೂ ಇದೇ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ರಕ್ಷಣೆ ಸಿಗದಿದ್ದರೆ ಹೇಗೆ? ಅವರೆಲ್ಲಾ ಏನು ಮಾಡಬೇಕು, ಅಧಿಕಾರಕ್ಕೆ ತಂದವರನ್ನೇ ರಕ್ಷಣೆ ಮಾಡಲಿಲ್ಲ ಎಂದರೆ ಇಂತಹ ಸರ್ಕಾರವನ್ನು ನಾವು ಏತಕ್ಕಾಗಿ ತರಬೇಕಿತ್ತು ಎನ್ನುವ ಪ್ರಶ್ನೆಗಳು ಪದಾಧಿಕಾರಿಗಳಿಂದಲೇ ಕೇಳಿ ಬಂದಿವೆ.
ಇದಕ್ಕೆ ನಿದರ್ಶನ ಎನ್ನುವಂತೆ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಇದ್ದೂ ಇಂತಹ ಘಟನೆ ನಡೆದಿರುವುದಕ್ಕೆ ನಾಚಿಕೆಯಾಗುತ್ತಿದೆ. ಕೇವಲ ಹೇಳಿಕೆಗಳಿಂದ ಏನು ಮಾಡಲು ಸಾಧ್ಯವಿಲ್ಲ, ಕೃತ್ಯವೆಸಗಿದ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಳವಳದ ಸ್ಥಿತಿ ಇದೆ, ಶಿವಮೊಗ್ಗದ ಅಮಾನುಷ ಹತ್ಯೆ ಹಿಂದಿನ ಷಡ್ಯಂತ್ರ, ಪಿತೂರಿ ಬಗ್ಗೆ ತನಿಖೆಯಾಗಬೇಕು, ತಕ್ಷಣವೇ ಅಮಾನುಷ ಕೃತ್ಯ ಮಾಡಿದವರ ಬಂಧನ ಮಾಡಬೇಕು ಅಷ್ಟು ಮಾತ್ರವಲ್ಲ, ಈ ರೀತಿಯ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳ ಸಭೆ ಮೂಲಕ ಒತ್ತಾಯ ಮಾಡಲಾಗಿದೆ. ಈ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಜೊತೆ ಪಕ್ಷ ಇರಲಿದೆ ಎನ್ನುವ ಅಭಯವನ್ನೂ ನೀಡಲಾಯಿತು.
ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ.. ಶಿವಮೊಗ್ಗದಲ್ಲಿ ಆರು ಆರೋಪಿಗಳ ಬಂಧನ, ಕರ್ಫ್ಯೂ ವಿಸ್ತರಣೆ
ಗೃಹ ಸಚಿವರ ವಿರುದ್ಧ ಅಸಮಾಧಾನ: ಗೃಹ ಸಚಿವ ಆರಗ ಜ್ಞಾನೇಂದ್ರ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು, ಸಂಪುಟದಲ್ಲಿ ಅವಕಾಶ ಸಿಗಲು ಅವರ ಸಂಘ ನಿಷ್ಟೆಯೂ ಪ್ರಮುಖ ಕಾರಣವಾಗಿದೆ. ಆದರೂ ಅವರು ಸಂಘ ಪರಿವಾರದ ನಂಟಿರುವ ಸಂಘಟನೆ ಕಾರ್ಯಕರ್ತನ ಹತ್ಯೆ ಸಂಚಿನ ಮಾಹಿತಿಯನ್ನು ಗುಪ್ತಚರ ಇಲಾಖೆಯಿಂದ ಪಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಘಟನೆ ನಡೆದ ನಂತರವೂ ಕಠಿಣ ಕ್ರಮಕ್ಕೆ ಮುಂದಾಗದೇ ಕೇವಲ ಹೇಳಿಕೆಗಳನ್ನು ನೀಡುತ್ತಿರುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾಲು ಸಾಲು ಘಟನಾವಳಿಗಳ ನಿದರ್ಶನ ಕಣ್ಣ ಮುಂದಿದ್ದರೂ ಎಸ್ಡಿಪಿಐ, ಪಿಎಫ್ಐ ನಂತಹ ಸಂಘಟನೆಗಳ ನಿಷೇಧಕ್ಕೆ ಮುಂದಾಗದ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೂಡಲೇ ಈ ಸಂಘಟನೆಗಳ ನಿಷೇಧಿಸವ ಮೂಲಕ ತಕ್ಕ ಉತ್ತರ ನೀಡಬೇಕು ಎನ್ನುವ ಒತ್ತಾಯ ಪಕ್ಷದಿಂದ ಕೇಳಿ ಬರುತ್ತಿದೆ.
ಸಿಎಂರನ್ನೇ ನೇರವಾಗಿ ಪ್ರಶ್ನಿಸಿದ ಸಿಟಿ ರವಿ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡ ಮುಖ್ಯಮಂತ್ರಿಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಕಚೇರಿಗೆ ಸಿಎಂ ಆಗಮಿಸಿದ್ದ ವೇಳೆ ಅನೌಪಚಾರಿಕ ಮಾತುಕತೆ ನಡೆದಿದ್ದು, ನಮ್ಮ ಸಂಘಟನೆಗಳ ಕಾರ್ಯಕರ್ತರಿಗೆ ನಮ್ಮ ಸರ್ಕಾರವೇ ರಕ್ಷಣೆ ಕೊಡಿದ್ದರೆ ಅವರಿಗೆ ನಾವು ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಇದು ಗುಪ್ತಚರ ವೈಫಲ್ಯವಾಗಿದೆ, ಸುಳಿವಿದ್ದರೂ ಮೈಮರೆತಿದ್ದು ಏಕೆ ಎಂದ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಆಂತರಿಕ ವಲಯದಿಂದ ಮತ್ತು ಸಂಘ ಪರಿವಾರದಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ಶಿವಮೊಗ್ಗ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಮ್ಮದೇ ಆಡಳಿತ ಇರುವಾಗ ಇಂತಹ ಘಟನೆಗಳು ನಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಪಕ್ಷದ ಮುಖಂಡರು ಮತ್ತು ಸಂಘ ಪರಿವಾರದ ಪ್ರಮುಖರ ಅಸಮಾಧಾನ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬಿಜೆಪಿ ಕಚೇರಿಗೆ ಭೇಟಿ ನೀಡಿ ವಿವರಣೆ ನೀಡಿದ್ದಾರೆ. ಸೂಕ್ತ ರಕ್ಷಣೆ ನೀಡುವ ಅಗತ್ಯ ಕ್ರಮ ಕೈಗೊಳ್ಳುವ ಅಭಯ ನೀಡಿದ್ದಾರೆ.
ಬಹುತೇಕ ಶಾಸಕರು,ಸಂಸದರು ಈ ವಿಚಾರದಲ್ಲಿ ಸಾಕಷ್ಟು ಅಸಮಾಧಾನದಲ್ಲಿದ್ದರೂ ಬಹಿರಂಗವಾಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಲು ಮುಂದಾಗಿಲ್ಲ, ಆಂತರಿಕವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸೋಣ ಎನ್ನುವ ನಿಲುವಿಗೆ ಬಂದಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿಸುತ್ತಿದ್ದಾರೆ.
ಒಟ್ಟಿನಲ್ಲಿ ಶಿವಮೊಗ್ಗ ಕೇಸ್ ನಲ್ಲಿ ಪ್ರತಿಪಕ್ಷ ಸದಸ್ಯರ ಬದಲು ಸ್ವಪಕ್ಷೀಯರಿಂದಲೇ ಸರ್ಕಾರ ಟೀಕೆ ಎದುರಿಸಬೇಕಾಗಿದ್ದು, ಆಡಳಿತಾರೂಢ ಪಕ್ಷವೇ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಬೂದಿ ಮುಚ್ಚಿದ ಕೆಂಡದಂತಿರುವ ವಿವಾದದ ವಿಷಯದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.