ಬೆಂಗಳೂರು: ರಾಜ್ಯದಲ್ಲಿ ಮದ್ಯ ಸಿಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕಡೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಒಲವು ತೋರಿದೆ, ಬುಧವಾರದಿಂದ ಎಂಎಸ್ಐಎಲ್ ಮೂಲಕ ಮದ್ಯ ಮಾರಾಟ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ನಾಳೆ ಅಂಬೇಡ್ಕರ್ ಜಯಂತಿ ಇದೆ. ಹೀಗಾಗಿ ಅಂಬೇಡ್ಕರ್ ಜಯಂತಿ ಮುಗಿದ ನಂತರ ಮದ್ಯ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಏಪ್ರಿಲ್ 14ರ ನಂತರ ಈ ಮದ್ಯ ಮಾರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎನ್ನುವ ಮೂಲಕ ಪರೋಕ್ಷವಾಗಿ ಏಪ್ರಿಲ್ 15 ರಿಂದ ಮದ್ಯ ಮಾರಾಟ ಮಾಡುವ ಬಗ್ಗೆ ತಿಳಿಸಿದ್ದಾರೆ, ಬಹುತೇಕ ಬುಧವಾರದಿಂದಲೇ ಮದ್ಯ ಮಾರಾಟ ಖಚಿತವಾಗಿದೆ.
ಮದ್ಯವನ್ನು ಕೌಂಟರ್ನಲ್ಲಿ ಸೇವಿಸಲು ಅವಕಾಶವಿಲ್ಲ, ಕೇವಲ ಪಾರ್ಸೆಲ್ ಪಡೆಯಬಹುದಾಗಿದೆ, ಟೇಕ್ ಅವೇ ವ್ಯವಸ್ಥೆ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ, ಇತರ ವೈನ್ ಸ್ಟೋರ್ ಗಳಿಗೂ ಟೇಕ್ ಅವೇ ವ್ಯವಸ್ಥೆ ಮದ್ಯ ಮೂಲಕ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಅವಕಾಶ ಕಲ್ಪಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲು ನಿರ್ಧರಿಸಲಾಗಿದ್ದು, ಮೊಬೈಲ್ ಮೂಲಕ ಕಾಲಾವಕಾಶ ಪಡೆದು ಕಚೇರಿಗೆ ಗ್ರಾಹಕರು ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.