ಬೆಂಗಳೂರು : ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದ ಬಳಿಕ ಕೊನೆಗೂ ಪ್ರತಿಪಕ್ಷ ನಾಯಕಸಿದ್ದರಾಮಯ್ಯಗೆ ಸರ್ಕಾರಿ ಕಾರು ಭಾಗ್ಯ ಲಭಿಸಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ನಿಯೋಜಿತರಾದ ಒಂದು ವರ್ಷದ ಬಳಿಕ ಸಿದ್ದರಾಮಯ್ಯ ಅವರಿಗೆ ಹೊಸ ಕಾರು ಭಾಗ್ಯ ಲಭಿಸಿದ್ದು, ಆರಂಭದಲ್ಲಿ ಸರ್ಕಾರಕ್ಕೆ ಕೆಲ ಬಾರಿ ಮನವಿ ಮಾಡಿದ ಅವರು ಇತ್ತೀಚೆಗೆ ಸರ್ಕಾರಿ ವಾಹನ ಕೇಳುವುದನ್ನೇ ಕೈಬಿಟ್ಟಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭ ತಾವು ಬಳಸುತ್ತಿದ್ದ ಖಾಸಗಿ ವಾಹನದಲ್ಲಿ ಓಡಾಡಿಕೊಂಡಿದ್ದರು.
ವರ್ಷದ ಹಿಂದೆ ಸಿದ್ದರಾಮಯ್ಯ ಮಾಡಿದ್ದ ಮನವಿಗೆ ಸ್ಪಂದಿಸಿದ ವಿಧಾನ ಸಭಾ ಸಚಿವಾಲಯ ಇದೀಗ ಸ್ಪೀಕರ್ ಸೂಚನೆ ಮೇರೆಗೆ ಹೊಸ ಕಾರು ನೀಡಿದೆ.
ಕಳೆದ ಒಂದೆರಡು ದಿನಗಳಿಂದ ಸಿದ್ದರಾಮಯ್ಯ ಈ ಹೊಸ ಟೊಯೋಟಾ ಕಂಪನಿಯ ಫಾರ್ಚ್ಯೂನರ್ ಕಾರಿನಲ್ಲೇ ಓಡಾಡುತ್ತಿದ್ದಾರೆ.
ಸೆಪ್ಟೆಂಬರ್ 21ರಿಂದ ಆರಂಭವಾಗುವ ಮಳೆಗಾಲದ ವಿಧಾನಮಂಡಲ ಅಧಿವೇಶನ ಸಂದರ್ಭ ಅಪ್ಪಿತಪ್ಪಿ ತಮಗೆ ಸರ್ಕಾರಿ ವಾಹನ ನೀಡಿಲ್ಲ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿ, ವಿಧಾನಸಭೆ ಸಭಾಧ್ಯಕ್ಷರಿಗೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆ ಇತ್ತು . ಆದರೆ ಹೊಸ ವಾಹನ ನೀಡುವ ಮೂಲಕ ಇಂಥದ್ದೊಂದು ಅವಕಾಶಕ್ಕೆ ತಡೆ ಹಾಕಲಾಗಿದೆ.