ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು 2020ನೇ ಸಾಲಿನಲ್ಲಿ ಆಚರಿಸುವ ಸಲುವಾಗಿ ಸಿಎಂ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಜೊತೆಗೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ್, ಲಚ್ಕ್ಷ್ಮದ್ಣ್ ಸವದಿ ಉಪಾಧ್ಯಕ್ಷರಾಗಿರಲಿದ್ದಾರೆ. ಒಟ್ಟು 54 ಸದಸ್ಯರ ಉನ್ನತ ಮಟ್ಟ ಸಮಿತಿಯಲ್ಲಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಎಸ್.ಟಿ.ಸೋಮಶೇಖರ್, ಸಿ.ಟಿ.ರವಿ ಸದಸ್ಯರಾಗಿದ್ದಾರೆ. ಇದರ ಜೊತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್, ಸಂಸದರಾದ ಶ್ರೀನಿವಾಸ್ ಪ್ರಸಾದ್, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಶಾಸಕರಾದ ರಾಮದಾಸ್, ಯತೀಂದ್ರ ಸಿದ್ದರಾಮಯ್ಯ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎನ್.ಮಹೇಶ್, ಸಾ.ರಾ.ಮಹೇಶ್, ಎಚ್.ವಿಶ್ವನಾಥ್, ಪುಟ್ಟರಂಗ ಶೆಟ್ಟಿ, ಮರಿತಿಬ್ಬೇಗೌಡ, ಧರ್ಮಸೇನಾ ಮುಂತಾದವರು ಇದ್ದಾರೆ.
ಇನ್ನು ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾದ ದಸರಾ ಕಾರ್ಯಕಾರಿ ಸಮಿತಿಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶಾಸಕರು ಸದಸ್ಯರಾಗಿರಲಿದ್ದಾರೆ.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಸರ್ಕಾರ ಉದ್ದೇಶಿಸಿದ್ದು, ಯಾವ ರೀತಿ ದಸರಾ ಆಚರಿಸಬೇಕು ಎಂಬ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಿದೆ.