ದಾವಣಗೆರೆ: ಕುಡಿವ ನೀರು ಹೊರತುಪಡಿಸಿ ನೀರಿನ ಲಭ್ಯತೆಯ ಆಧಾರದ ಮೇಲೆ ಬೇಸಿಗೆ ಹಂಗಾಮಿಗೆ ಶಾಂತಿಸಾಗರದಿಂದ ರೈತರ ಬೆಳೆಗೆ ನೂರು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿದೆ.
ಬೆಳೆದು ನಿಂತ ತೋಟದ ಬೆಳೆ ಮತ್ತು ಅರೆ ನೀರಾವರಿ ಬೆಳೆಗಳಿಗೆ ಮಾತ್ರ ಶಾಂತಿಸಾಗರ ಕೆರೆಯ ಸಿದ್ಧನಾಲಾ ಮತ್ತು ಬಸವನಾಲಾ ಕಾಲುವೆಯ ಮೂಲಕ ನಿರಂತರವಾಗಿ ನೂರು ದಿನಗಳ ಕಾಲ ನೀರು ಹರಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಜನವರಿ 22 ರಿಂದ ನೀರು ಹರಿಸಲಾಗುತ್ತಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಹಂಗಾಮಿನಲ್ಲಿ ರೈತರು ಅಧಿಸೂಚಿತ ಅಚ್ಚುಕಟ್ಟಿನ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಹೆಚ್ಚು ನೀರುಣ್ಣುವ ಬೆಳೆಗಳಾದ ಭತ್ತ ಅಥವಾ ಇನ್ನಿತರ ಬೆಳೆಗಳನ್ನು ಬೆಳೆಯಬಾರದಾಗಿ ಹಾಗೂ ಅಧಿಸೂಚಿತ ಅಚ್ಚುಕಟ್ಟಿನ ಪ್ರದೇಶದಲ್ಲಿ ಬೆಳೆದು ನಿಂತ ತೋಟದ ಬೆಳೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದ್ದು, ಇದಕ್ಕೆ ಮಾತ್ರ ನೀರು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ನಿರ್ದಿಷ್ಟವಾಗಿ ತಿಳಿಸಿರುವ ಅಧಿಸೂಚಿತ ಬೆಳೆಗಳನ್ನು ಬೆಳೆಯದೇ ಬೆಳೆ ಉಲ್ಲಂಘನೆ ಮಾಡಿ ಇನ್ನಿತರ ಬೆಳೆಗಳನ್ನು ಬೆಳೆದರೆ ಜಲ ಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ. ಅಧಿಸೂಚಿತ ಬೆಳೆ ಪದ್ಧತಿ ಉಲ್ಲಂಘಿಸಿದರೆ, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸಿದರೆ, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸಿದರೆ ಮತ್ತು ಪಂಪ್ ಮಾಡಿ ಅನಧಿಕೃತವಾಗಿ ನೀರು ಬಳಸಿಕೊಂಡು ನೀರಾವರಿ ಬೆಳೆಗಳನ್ನು ಬೆಳೆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ.