ಬೆಂಗಳೂರು: ''ಬೆಳಗಾವಿ ರಾಜಕಾರಣದಲ್ಲಿ ಸಮಸ್ಯೆ ಮತ್ತೆ ಉಕ್ಕುತ್ತಿದೆ. ಬೆಳಗಾವಿಯಲ್ಲಿ ಸಮಸ್ಯೆ ಪ್ರಾರಂಭ ಆದರೇನೇ ಸರ್ಕಾರಗಳು ಉರುಳುತ್ತವೆ. ಈಗಲೂ ಅಂತಹದ್ದೇ ಲಕ್ಷಣ ಕಾಣಿಸುತ್ತಿದೆ. ಮಹಾಭಾರತದ ಯುದ್ಧ ಒಂದು ಸಲಕ್ಕೆ ನಿಂತಿಲ್ಲ. ನಡೀತನೇ ಇತ್ತು, ಅದೇ ರೀತಿ ಬೆಳಗಾವಿ ರಾಜಕಾರಣದಲ್ಲಿಯೂ ಶೀತಲ ಸಮರ ನಡೆಯುತ್ತಲೇ ಇದೆ. ಯಾವಾಗ ಏನಾಗಲಿದೆಯೋ ಗೊತ್ತಿಲ್ಲ'' ಎಂದು ಮಾಜಿ ಸಚಿವ ಮುನಿರತ್ನ ಅವರು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಪತನದ ಹಾದಿಯಲ್ಲಿದೆ ಎನ್ನುವುದನ್ನು ಹೇಳಿದ್ದಾರೆ.
ವೈಯಾಲಿ ಕಾವಲ್ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬೆಳಗಾವಿಯಲ್ಲಿ ಮತ್ತೆ ರಾಜಕಾರಣ ಶುರುವಾಗಿದೆ. ಈ ಮೊದಲು ಸಮ್ಮಿಶ್ರ ಸರ್ಕಾರ ಉರುಳಿದ್ದೇ ಬೆಳಗಾವಿ ರಾಜಕಾರಣದಿಂದ, ಬೆಳಗಾವಿಯಲ್ಲಿ ರಾಜಕಾರಣ ಶುರುವಾದಾಗಲೆಲ್ಲ ಸರ್ಕಾರಗಳಿಗೆ ಗಂಡಾಂತರ ಬರುತ್ತದೆ. ಈಗ ಕಾವೇರಿ ನೀರು ಉಕ್ಕಿ ಹರಿಯುವ ರೀತಿಯಲ್ಲಿ ಬೆಳಗಾವಿ ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ಉಕ್ಕಿ ಹರಿಯುತ್ತಿದೆ. ಹಿಂದೆ ಇದೇ ರೀತಿ ಅಲ್ಲಿ ಉಕ್ಕಿ ಹರಿದು ಮೈತ್ರಿ ಸರ್ಕಾರ ಪತನ ಆಗಿತ್ತು. ಈಗಿನ ಸರ್ಕಾರದಲ್ಲೂ ಅಂತಹದ್ದೇ ಸ್ಥಿತಿ ಶುರುವಾಗಿದೆ. ಇದು ಬೆಂಗಳೂರಲ್ಲಿ ಮುಕ್ತಾಯ ಆಗುತ್ತದೆ ಎಂದು ಟಾಂಗ್ ನೀಡಿದರು.
''126 ಕೋಟಿ ಅನುದಾನ ವಾಪಸ್ ಪಡೆಯಲಾಗಿದೆ. ನನ್ನ ಕ್ಷೇತ್ರದ ಅನುದಾನ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಲಾಗಿದೆ. ನಮ್ಮ ಅನುದಾನ ಬೇರೆ ಕ್ಷೇತ್ರಗಳಿಗೆ ಹೇಗೆ ಕೊಡ್ತಾರೆ ಅವರು? ಡಿಸಿಎಂ ಅವರು ಕಾಮಗಾರಿಗಳ ಪಟ್ಟಿ ಕೇಳಿದ್ದರು. ಅವರು ಕೇಳಿದ ವಿವರ ಸಲ್ಲಿಸಿದ್ದೇನೆ. ನನಗೆ ನಂಬಿಕೆ ಇದೆ, ನನ್ನ ಕ್ಷೇತ್ರದ ಅನುದಾನ ವಾಪಸ್ ಬಂದೇ ಬರುತ್ತದೆ ಎಂದು, ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ. ಅವರು ಅನುದಾನ ಕೊಡದಿದ್ದರೆ, ಮುಂದೇನು ಮಾಡಬೇಕೆಂದು ತಿಳಿಸ್ತೇನೆ. ಅನುದಾನ ವಾಪಸ್ ಬರದಿದ್ದರೆ, ಮತ್ತೆ ಪ್ರತಿಭಟನೆ ಮಾಡಲ್ಲ, ಕಾಲು ಹಿಡಿಯಲ್ಲ'' ಎಂದರು.
ದೇವಾನುದೇವತೆಗಳು ತಥಾಸ್ತು ಎಂದರೆ ಕಷ್ಟವಾಗಲಾರದು- ಮುನಿರತ್ನ: ಆಪರೇಷನ್ ಕಮಲದ ಬಗ್ಗೆ ಡಿಸಿಎಂ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, ''ಕಾಂಗ್ರೆಸ್ಗೆ ಜನ 135 ಸೀಟ್ ಕೊಟ್ಟಿದ್ದಾರೆ. ಹಾಗಾಗಿ ಅವರು ನೆಮ್ಮದಿಯಾಗಿ ಆಡಳಿತ ಮಾಡಲಿ. ಒಳ್ಳೆಯ ಸರ್ಕಾರ ಕೊಡಲಿ. ನಮಗೆ ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಳ್ಳುವ ಆಲೋಚನೆ ಇಲ್ಲ. ನಮಗೆ ಆ ರೀತಿಯ ಆಲೋಚನೆ ಬರುವ ತರ ಇವರೇ ಮಾಡುವುದು ಬೇಡ. ಡಿಕೆ ಶಿವಕುಮಾರ್ ಇಲ್ಲ ಸಲ್ಲದ ಆರೋಪ ಮಾಡುವ ಬದಲು ಉತ್ತಮ ಆಡಳಿತ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳಲಿ. 17*3 ಮಾಡುವುದು ನಮಗೇನೂ ಕಷ್ಟ ಇಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿಗೆ 17 ಜನ ಬಂದಿದ್ದೆವು. ಈಗ ಅದನ್ನು 17*3 ಮಾಡುವುದು ಕಷ್ಟ ಏನಲ್ಲ. ನಾವು ಆಪರೇಷನ್ಗೆ ಕೈಹಾಕಿದರೆ, ಅವರೇ ಹೇಳಿದ ಮಾತು ಸತ್ಯವಾಗುತ್ತದೆ. ದೇವಾನುದೇವತೆಗಳು ತಥಾಸ್ತು ಎಂದರೆ ಕಷ್ಟ ಏನು ಆಗಲ್ಲ ಎಂದು ಮುನಿರತ್ನ ತಿರುಗೇಟು ನೀಡಿದ್ದಾರೆ.
ಕುರಿ ಕೋಳಿ ಕಡಿಯಿರಿ ಎಂದಿರಬೇಕು- ಮುನಿರತ್ನ ವ್ಯಂಗ್ಯ: ವಿಧಾನಸೌಧದಲ್ಲಿ ಕುಂಬಳಕಾಯಿ, ಅರಿಶಿಣ ಕುಂಕುಮ ಬಳಕೆ ಕುರಿತ ಸರ್ಕಾರಿ ಆದೇಶ ವಿಚಾರದ ಕುರಿತು ಪ್ರತಿಕ್ರಿಯಿಸಿ, ''ಕುಂಬಳಕಾಯಿ ಒಡೆಯೋದು ತಪ್ಪು ಎಂದರೆ, ಅದು ಕುರಿ, ಕೋಳಿ ಕಡಿಯಿರಿ ಅಂತ ಆದೇಶ ಇರಬೇಕು ಅವರು ಹೊರಡಿಸಿರುವ ಆದೇಶ ಮಿಸ್ಟೇಕ್ ಆಗಿದೆ. ಕುರಿ ಕೋಳಿ ಕಡಿಯಿರಿ ಅಂತ ಇರಬೇಕು'' ಎಂದು ವ್ಯಂಗ್ಯವಾಡಿದರು.
ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧಕ್ಕೆ ಕುಂಬಳಕಾಯಿ ಒಡೆದೇ ಪ್ರವೇಶ ಮಾಡಿರೋದು. ದೀಪ ಹಚ್ಚಿಯೇ ಪ್ರವೇಶ ಮಾಡಿರೋದು. ಆ ಜಾಗದಲ್ಲೇ ಇವತ್ತು ಅರಿಶಿಣ ಕುಂಕುಮ ಬೇಡ, ಕುಂಬಳಕಾಯಿ ಬೇಡ ಅಂತಾರಲ್ಲ ಇವರು? ಇದರರ್ಥ ಏನು? ಇದನ್ನು ನಿಲ್ಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕುಂಬಳಕಾಯಿ ಬೇಡ ರಕ್ತದ ಬಲಿ ಕೊಡಿ ಅನ್ನೋ ಉದ್ದೇಶನಾ? ಕೆಂಗಲ್ ಹನುಮಂತಯ್ಯ ತಪ್ಪು ಮಾಡಿದ್ದಾರೆ. ನಾವು ಸರಿ ಮಾಡ್ತೀವಿ ಅನ್ನೋದು ಇವರ ಉದ್ದೇಶ ಇರಬೇಕು'' ಎಂದು ಕಿಡಿಕಾರಿದರು.
ಇಬ್ರಾಹಿಂ ಮೂವಿ ಯಾರೂ ನೋಡಲ್ಲ: ''ಸಿಎಂ ಇಬ್ರಾಹಿಂ ಮೂವಿ ಯಾರೂ ನೋಡಲ್ಲ, ಅವರು ಔಟ್ ಡೇಟೆಡ್ ಹೀರೋ. ದೇವೇಗೌಡ್ರು ನನ್ನ ದೇವರು, ಹಾರ್ಟ್, ಕಿಡ್ನಿ, ಕುಮಾರಸ್ವಾಮಿ ನನ್ನ ಉಸಿರು ಅಂತ ಹೇಳಿದ ವ್ಯಕ್ತಿ ಇಬ್ರಾಹಿಂ ಈಗ ದೇವೇಗೌಡರ ಪಕ್ಷಕ್ಕೆ ವಾರಸುದಾರ ಆಗಲು ಹೋಗುತ್ತಿದ್ದಾರೆ. ದೇವೇಗೌಡರ ಶ್ರಮ, ಪಕ್ಷ ಕಟ್ಟಲು ಹರಿಸಿದ ಬೆವರ ಹನಿ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತು. ಆವತ್ತು ರಾಮಕೃಷ್ಣ ಹೆಗಡೆ ಅವರನ್ನು ಸಸ್ಪೆಂಡ್ ಮಾಡಲು ಯಾರು ಕಾರಣ? ಇದೇ ಇಬ್ರಾಹೀಂ ತಾನೇ ಕಾರಣ. ದೇವೇಗೌಡರರಿಗೆ ಅವತ್ತು ದಾರಿ ತಪ್ಪಿಸಿದ್ದು, ಇದೇ ಇಬ್ರಾಹಿಂ. ಹೆಗಡೆ ಉಚ್ಛಾಟನೆ ಮಾಡಿಸಿದ್ದು ಇದೇ ಇಬ್ರಾಹಿಂ. ಆದರೆ, ಅದರ ಎಲ್ಲ ತಪ್ಪು ದೇವೇಗೌಡರ ಮೇಲೆ ಬಂತು'' ಎಂದರು.
ಇದನ್ನೂ ಓದಿ: ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ... ನನ್ನ ಮೌನ ದೌರ್ಬಲ್ಯವಲ್ಲ: ಸಚಿವ ಸತೀಶ್ ಜಾರಕಿಹೊಳಿ