ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದು ತಪಾಸಣೆ ನಡೆಸಿದ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ವೈದ್ಯರಾದ ಶಂಕರ್ ಗುಹಾ ಹಾಗೂ ಇತರೆ ವೈದ್ಯರು ತಪಾಸಣೆ ನಡೆಸಿದ್ದು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಶಂಕರ್ ಗುಹಾ, ಡಿಕೆ ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಮೂರು ಗಂಟೆ ವಿಶ್ರಾಂತಿ ಪಡೆದುಕೊಳ್ಳಲು ಸಲಹೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಪ್ರಯಾಣ ಬೇಡವೆಂದು ಸಲಹೆ ನೀಡಲಾಗಿದೆ. ಹೊಟ್ಟೆಯಲ್ಲಿ ಸೋಂಕಿನಿಂದ ಲೂಸ್ ಮೋಷನ್ ರೀತಿ ಆಗಿದೆ. ಪ್ರಯಾಣ ಎಷ್ಟು ಮುಖ್ಯವೋ ಆರೋಗ್ಯ ಸಹ ಅಷ್ಟೇ ಮುಖ್ಯ. ಮಂಗಳವಾರ ಮುಂಜಾನೆ ಇನ್ನೊಂದು ಸಾರಿ ತಪಾಸಣೆ ಮಾಡಲಾಗುತ್ತದೆ. ಡಿಕೆಶಿ ಹೆಚ್ಚು ಬಳಲಿದ್ದಾರೆ. ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಂದು ಹೈಕಮಾಂಡ್ ನಾಯಕರ ಕರೆಯ ಮೇರೆಗೆ ಡಿಕೆ ಶಿವಕುಮಾರ್ ದಿಲ್ಲಿಗೆ ತೆರಳಬೇಕಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಬುಲಾವ್ ನೀಡಿತ್ತು. ಮಧ್ಯಾಹ್ನ 1 ಗಂಟೆಗೆ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದ್ದಾರೆ. ಆದರೆ ಸಂಜೆ 4 ಗಂಟೆಗೆ ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ತೆರಳುವ ಬದಲು ತುಮಕೂರಿನ ಅಜ್ಜಯನ ಮಠಕ್ಕೆ ಭೇಟಿ ನೀಡಿದ್ದರು.
ಸಿಎಂ ಪಟ್ಟವನ್ನು ಸಿದ್ದರಾಮಯ್ಯಗೆ ವಹಿಸುವ ನಿಟ್ಟಿನಲ್ಲಿ ಹೈಕಮಾಂಡ್: ಅಲ್ಲಿಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಮಾತನಾಡಿದ್ದ ಅವರು ಇಲ್ಲಿಗೆ ತೆರಳುವ ವಿಚಾರವಾಗಿ ತೀರ ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಸಂಜೆ ನಗರಕ್ಕೆ ಹಿಂದಿರುಗಿದ ಅವರು ತಾವು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ದಿಲ್ಲಿಗೆ ತೆರಳದೆ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಪಟ್ಟವನ್ನು ಸಿದ್ದರಾಮಯ್ಯಗೆ ವಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಇದ್ದು, ಇದರಿಂದ ಡಿಕೆಶಿ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗುತ್ತದೆ.
ಇನ್ನೊಂದೆಡೆ ದಿಲ್ಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ತೆರಳಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್, ಆರ್.ವಿ ದೇಶಪಾಂಡೆ, ಶರಣಪ್ರಕಾಶ್ ಪಾಟೀಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಇದೇ ಸಂದರ್ಭ ಡಿ ಕೆ ಶಿವಕುಮಾರ್ ಅಸಮಾಧಾನ ಹಾಗೂ ಬೇಸರದ ವಿಚಾರವನ್ನು ಸಹ ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಇದೆ. ಐದು ವರ್ಷದ ಅಧಿಕಾರವನ್ನು ತಲಾ ಎರಡೂವರೆ ವರ್ಷ ಮುಖ್ಯಮಂತ್ರಿಗಳಾಗಿ ನಡೆಸುವಂತೆ ಹೈಕಮಾಂಡ್ ಇಬ್ಬರು ನಾಯಕರಿಗೆ ತಿಳಿಸಿತ್ತು ಎಂಬ ಮಾಹಿತಿ ಇದೆ.
ಆದರೆ ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಡಿಕೆಶಿ ಛತ್ತೀಸ್ಗಡ ಹಾಗೂ ಮಧ್ಯಪ್ರದೇಶದ ಉದಾಹರಣೆ ನೀಡಿದ್ದು, ಮೊದಲ ಅವಧಿಗೆ ನಿಯೋಜಿತರಾದ ಮುಖ್ಯಮಂತ್ರಿಗಳು ಅಧಿಕಾರ ಬಿಟ್ಟು ಕೊಡದೆ ತಾವೇ ಮುಂದುವರಿದಿದ್ದಾರೆ. ಹೀಗಾಗಿ ತಾವು ಅಧಿಕಾರ ನೀಡುವುದಾದರೆ ಮೊದಲ ಅವಧಿ ತಮಗೆ ನೀಡಬೇಕೆಂದು ಹೈಕಮಾಂಡ್ ಮುಂದೆ ಪ್ರಸ್ತಾಪ ಸಲ್ಲಿಸಿದ್ದರು ಎಂಬ ಮಾಹಿತಿ ಇದೆ. ಇದಕ್ಕೆ ಪಕ್ಷ ಯಾವ ನಿರ್ಧಾರ ಕೈಗೊಂಡಿದೆಯೋ ಮಾಹಿತಿ ಇಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಇನ್ನೂ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ.
ಉಭಯ ನಾಯಕರು ಈ ರೀತಿ ನಡವಳಿಕೆ ತೋರುತ್ತಿರುವುದರ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಡಿಸಿಎಂ ಜಿ. ಪರಮೇಶ್ವರ್ ನಿವಾಸದಲ್ಲಿಯೂ ಮಹತ್ವದ ಸಭೆ ನಡೆದಿದೆ. ರಾಜ್ಯ ಕಾಂಗ್ರೆಸ್ನ ಪ್ರಸಕ್ತ ವಿದ್ಯಮಾನದ ಕುರಿತು ಪರಮೇಶ್ವರ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಸಿಎಂ ಪದವಿಗಾಗಿ ದೊಡ್ಡಮಟ್ಟದ ಪೈಪೋಟಿ ನಡೆದರೆ ಪಕ್ಷದ ವರ್ಚಸ್ಸು ಉಳಿಸಿಕೊಳ್ಳಲು ಯಾವ ರೀತಿಯ ನಡೆ ಕೈಗೊಳ್ಳಬೇಕು ಎಂಬ ಬಗ್ಗೆ ಅವರು ಸಮಾಲೋಚಿಸಿದ್ದಾರೆ.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಾವು ತೆರಳಲು ಸಾಧ್ಯವಾಗದ ಹಿನ್ನೆಲೆ ತಮ್ಮ ಪರವಾಗಿ ಸೋದರ ಹಾಗೂ ಸಂಸದ ಡಿ ಕೆ ಸುರೇಶ್ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಶಾಸಕ ಎನ್ಎ ಹ್ಯಾರಿಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ದಿಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಜೊತೆ ತಮ್ಮ ಪರವಾಗಿ ಚರ್ಚಿಸುವಂತೆ ಅವರು ಕೋರಿದ್ದಾರೆ. ಅನಾರೋಗ್ಯದ ಹಿನ್ನೆಲೆ ತಮಗೆ ಬರಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯನ್ನು ಸಹ ನೀಡುವಂತೆ ಅವರು ವಿವರಿಸುವಂತೆ ತಿಳಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ದೊಡ್ಡಮಟ್ಟದ ಚರ್ಚೆ ನಡೆದಿದ್ದು ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
ಇದನ್ನೂ ಓದಿ: ಅನಾರೋಗ್ಯದ ಕಾರಣ ದೆಹಲಿ ಪ್ರವಾಸದಿಂದ ಹಿಂದೆ ಸರಿದ ಡಿ ಕೆ ಶಿವಕುಮಾರ್